

ಬೆಂಗಳೂರು: ಕಾರ್ಖಾನೆಗೆ ನೌಕರರನ್ನು ಕರೆದುಕೊಂಡು ಸಾಗುತ್ತಿದ್ದ ಮಿನಿ ಬಸ್, ರಸ್ತೆಬದಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮನೌಕರ ಮೃತಪಟ್ಟು, ಐವರು ನೌಕರರು ಗಾಯಗೊಂಡಿದ್ದಾರೆ.
ಕುಣಿಗಲ್ ನಿವಾಸಿ ದೇವರಾಜ್ (41) ಮೃತ ನೌಕರ. ಐವರು ನೌಕರರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಬೆಳಗ್ಗೆ 8.50ರಲ್ಲಿ ನೈಸ್ ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೊಮ್ಮಸಂದ್ರದ ಖಾಸಗಿ ಕಾರ್ಖಾನೆಯಲ್ಲಿ ದೇವರಾಜ್ ಕೆಲಸ ಮಾಡುತ್ತಿದ್ದರು. ಕುಣಿಗಲ್‌ನಿಂದ ಪ್ರತಿ ದಿನ ಕೆಲಸಕ್ಕೆ ಬಂದು ಹೋಗುತ್ತಿದ್ದರು. ಬೆಳಗ್ಗೆ ಕಾರ್ಖಾನೆಯ ಮಿನಿ ಬಸ್ ಚಾಲಕ ವಿವಿಧ ಪ್ರದೇಶದಿಂದ 30 ನೌಕರರನ್ನು ಕರೆದುಕೊಂಡು ಗೋರಗುಂಟೆಪಾಳ್ಯದಿಂದ ನೈಸ್ ರಸ್ತೆ ಮುಖಾಂತರ ಬೊಮ್ಮಸಂದ್ರಕ್ಕೆ ಹೊರಟ್ಟಿದ್ದ. ಮಿನಿ ಬಸ್‌ನಲ್ಲಿ ದೇವರಾಜ್ ಸಹ ಇದ್ದರು.
ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಮಿನಿ ಬಸ್ ಚಾಲಕ ವೇಗವಾಗಿ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಬದಿ ನಿಲುಗಡೆ ಮಾಡಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ ಮಿನಿ ಬಸ್‌ನಲ್ಲಿದ್ದ ದೇವರಾಜು ಸೇರಿ ಆರು ನೌಕರರು ಗಾಯಗೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ದೇವರಾಜ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಕಾರ್ಖಾನೆಯ ಮಿನಿ ಬಸ್ ಚಾಲಕ ಅತೀ ವೇಗದ ಚಾಲನೆ ಮತ್ತು ಸಿಗ್ನಲ್ ಹಾಕದೆ ರಸ್ತೆಬದಿ ಲಾರಿ ನಿಲುಗಡೆ ಮಾಡಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಈ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.