ಸಂಪಾದಕೀಯ | ರಾಷ್ಟ್ರೀಯ ಭದ್ರತೆಯ ಸಂದೇಶ

dk - 2025-05-12T205652.194
Published on

ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವು ರಾಷ್ಟ್ರೀಯ ಭದ್ರತೆ, ಸಶಸ್ತ್ರ ಪಡೆಗಳ ಸಾಮರ್ಥ್ಯ ಮತ್ತು ಜಾಗತಿಕ ವೇದಿಕೆಯಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾಬಲ್ಯವನ್ನು ಎತ್ತಿತೋರಿಸಿದೆ. ದೇಶದ ಧೈರ್ಯ, ಶಕ್ತಿ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನೂ, ಅದರಲ್ಲೂ ವಿಶೇಷವಾಗಿ ಇತ್ತೀಚಿನ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಸನ್ನಿವೇಶದ ನಂತರ ನಡೆದ ಘಟನಾವಳಿಗಳನ್ನೂ ಜನತೆಯೆದುರು ತೆರೆದಿಟ್ಟಿದೆ.

ದೇಶದ ಸಶಸ್ತ್ರ ಪಡೆಗಳಿಗೆ, ಗುಪ್ತಚರ ಸಂಸ್ಥೆಗಳಿಗೆ ಮತ್ತು ವೈಜ್ಞಾನಿಕ ಸಮುದಾಯಕ್ಕೆ ಪ್ರಧಾನಿ ತಮ್ಮ ಭಾಷಣದ ಮೂಲಕ ಗೌರವವನ್ನೂ ಸಲ್ಲಿಸಿದರು. ಆಪರೇಷನ್ ಸಿಂಧೂರ್ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದ ಅವರು, ಭಯೋತ್ಪಾದನೆಗೆ ತಕ್ಕ ಉತ್ತರ ನೀಡುವ ಭಾರತದ ಸಂಕಲ್ಪವನ್ನು ಈ ಕಾರ್ಯಾಚರಣೆ ತೋರಿಸಿದ್ದನ್ನು ಉಲ್ಲೇಖಿಸಿದರು. ಸೇನೆಯ ಶಕ್ತಿಯನ್ನು ಮಾತ್ರವಲ್ಲ, ದೇಶದ ಒಗ್ಗಟ್ಟು ಮತ್ತು ಧೈರ್ಯವನ್ನು ಸಹ ಮೋದಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಭಾರತ ಕೇವಲ ರಕ್ಷಣಾತ್ಮಕವಾಗಿರದೆ, ಆಕ್ರಮಣಕಾರಿ ಭಯೋತ್ಪಾದನೆಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಸಂದೇಶವನ್ನು ಜಾಗತಿಕ ಸಮುದಾಯಕ್ಕೆ ತಲುಪಿಸಿದರು. ಜೊತೆಗೆ, ಗುಪ್ತಚರ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಮುದಾಯದ ಕೊಡುಗೆಯನ್ನು ಶ್ಲಾಘಿಸುವ ಮೂಲಕ, ಆಧುನಿಕ ಯುದ್ಧದಲ್ಲಿ ತಂತ್ರಜ್ಞಾನ ಮತ್ತು ಗುಪ್ತಚರ ಮಾಹಿತಿಯ ಪ್ರಾಮುಖ್ಯತೆಯನ್ನು ಮೋದಿ ಪ್ರತಿಪಾದಿಸಿದರು.

ಇದೇ ವೇಳೆ ಸೋಮವಾರ ಮಧ್ಯಾಹ್ನ ಭಾರತೀಯ ರಕ್ಷಣಾ ಪಡೆಗಳ ಹಿರಿಯ ಅಧಿಕಾರಿಗಳು ನಡೆಸಿದ ಸುದ್ದಿಗೋಷ್ಠಿ ಕೂಡ ಇದೇ ಭಾವನೆಗಳನ್ನು ಪ್ರತಿಬಿಂಬಿಸುವಂತಿತ್ತು. ತಾಂತ್ರಿಕ ಮತ್ತು ಕಾರ್ಯಾಚರಣೆಯ ಆಯಾಮವನ್ನು ಅದು ಒದಗಿಸಿತು. ಆಪರೇಷನ್ ಸಿಂಧೂರ್​ನ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಭಾರತೀಯ ಸೇನೆಯ ತಯಾರಿ, ಶಿಸ್ತು ಮತ್ತು ಆಧುನಿಕ ತಂತ್ರಜ್ಞಾನದ ಬಳಕೆ, ಭಾರತದ ರಕ್ಷಣಾ ವ್ಯವಸ್ಥೆಯ ದಕ್ಷತೆಯ ಬಗ್ಗೆ ವಿವರಿಸಿದರು. ಭಾರತ ತನ್ನ ಗಡಿಗಳ ಸುರಕ್ಷತೆಯ ವಿಷಯದಲ್ಲಿ ದೃಢವಾದ ನಿಲುವನ್ನು ತಾಳಿರುವುದು, ಸೇನೆಗೆ ಆಧುನಿಕ ತಂತ್ರಜ್ಞಾನ, ಗುಪ್ತಚರ ಮಾಹಿತಿ ಮತ್ತು ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ಒದಗಿಸಿರುವುದು ಅವರ ಮಾತುಗಳಿಂದ ದೃಢಪಡುತ್ತದೆ.

ಪ್ರಧಾನಿ ಮೋದಿ ಅವರ ಭಾಷಣವು ದೇಶದ ಜನತೆಯಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ಒಗ್ಗಟ್ಟಿನ ಭಾವನೆಯನ್ನು ಮತ್ತೊಮ್ಮೆ ಸ್ಪುರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇಂತಹ ಕಠಿಣ ಸಂದರ್ಭಗಳಲ್ಲಿ ಇದು ಅತ್ಯಗತ್ಯ. ಆದರೆ ಭಾರತ-ಪಾಕಿಸ್ತಾನ ಸಂಬಂಧ ಈಗಲೂ ಸೂಕ್ಷ್ಮವಾಗಿದೆ ಎಂಬುದನ್ನು ಭಾರತ ಮರೆಯುವುದಿಲ್ಲ. ಇದನ್ನು ಪಾಕ್ ಕೂಡ ನೆನಪಿಟ್ಟುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಅದರ ವರ್ತನೆ ಹೇಗಿರುತ್ತದೆ ಎಂಬುದನ್ನು ಆಧರಿಸಿ ಭಾರತದ ಪ್ರತಿಕ್ರಿಯೆ ಕೂಡ ನಿರ್ಧಾರವಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ನೀಡಿರುವುದು ಸಕಾಲಿಕವಾಗಿದೆ. ದೀರ್ಘಕಾಲೀನ ಶಾಂತಿ, ಸ್ಥಿರತೆಗೆ ರಾಜತಾಂತ್ರಿಕ ಸಮತೋಲನ ಮತ್ತು ಸಮಗ್ರ ರಾಷ್ಟ್ರೀಯ ತಂತ್ರಗಾರಿಕೆ ಕೂಡ ಅಗತ್ಯ. ತನ್ನ ಗಡಿಗಳನ್ನು ಸುರಕ್ಷಿತವಾಗಿ ಇರಿಸಿಕೊಂಡು, ಜಾಗತಿಕ ವೇದಿಕೆಯಲ್ಲಿ ಒಂದು ಶಕ್ತಿಯಾಗಿ ಮುಂದುವರಿಯಬೇಕಾದ ಸವಾಲು ಇದೀಗ ಭಾರತದ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net