ಯುವಸಮುದಾಯಕ್ಕೆ ಮಾರ್ಗದರ್ಶಕ; ಬಾಲ್ಕ್ ಸಂಸ್ಥೆ ಸ್ಥಾಪಕ ನಟರಾಜ್ ಗೌಡ

photo (4)
Published on

ವಿಜಯವಾಣಿ ಸುದ್ದಿಜಾಲ, ಬೆಂಗಳೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಂದಾನಿಗೌಡನಪಾಳ್ಯದಲ್ಲಿ ನಂಜುಂಡಯ್ಯ ಮತ್ತು ಶಾಂತಮ್ಮ ದಂಪತಿಯ ಐವರು ಪುತ್ರರಲ್ಲಿ ಮೂರನೇ ಮಗನಾಗಿ 1977ರ ಜು.15ರಂದು ಜನಿಸಿದ ಎ.ಎನ್.ನಟರಾಜ್ ಗೌಡ, ಗ್ರಾಮೀಣ ಪ್ರದೇಶದ ಬಡ ಕುಟುಂಬದಿಂದ ಬಂದ ಪ್ರತಿಭೆ. ತಮ್ಮ ಅಚಲ ನಿರ್ಧಾರದಿಂದಾಗಿ ಸ್ಥಾಪಿಸಿದ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಆಂಡ್ ಕಮ್ಯೂನಿಕೇಶನ್ (ಬಾಲ್ಕ್) ಸಂಸ್ಥೆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಕಾಂಗ್ರೆಸ್​ನ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವಾ ಕಾರ್ಯವನ್ನು ಗುರುತಿಸಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ಯು ವಿಜಯರತ್ನ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

ತಾಯಿ ಶಾಂತಮ್ಮ ಅವರ ತವರೂರು, ಮಾಗಡಿ ತಾಲೂಕಿನ ಹೊಸಪಾಳ್ಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಎ.ಎನ್. ನಟರಾಜ್ ಗೌಡ, ಅತೀವ ಬಡತನ ಹಾಗೂ ಅನಿವಾರ್ಯ ಕಾರಣಗಳಿಂದ ತಮ್ಮ ಎ.ಎನ್.ಗೌರೀಶ ಅವರೊಂದಿಗೆ ಒಂದು ವರ್ಷ ಕುಟುಂಬದಿಂದ ದೂರಾಗಿ ಅನಾಥಾಶ್ರಮದಲ್ಲಿ ಬೆಳೆಯಬೇಕಾಯಿತು. ನಂತರ ಬೆಂಗಳೂರಿನ ಮಾಗಡಿ ರಸ್ತೆ ಸುಂಕದಕಟ್ಟೆಯಲ್ಲಿನ ಶಿಲ್ಪಶ್ರೀ ಎಂಬ ಖಾಸಗಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ಶ್ರೀಗಂಧಕಾವಲ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಹಾಗೂ ವಿ.ವಿ.ಪುರದ ವಿಜ್ಞಾನ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಶೈಕ್ಷಣಿಕ ಅವಧಿಯಲ್ಲಿ ಊರಿನಲ್ಲಿ ಎಮ್ಮೆ ಮೇಯಿಸುತ್ತ ತಾಯಿಗೆ ಮನೆ ಕೆಲಸದಲ್ಲಿ ನೆರವಾಗುತ್ತ ವಾರಾಂತ್ಯ ಕಳೆಯುತ್ತಿದ್ದರು ನಟರಾಜ್ ಗೌಡ. ಪದವಿ ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗ ಹುಡುಕಲು ಮುಂದಾದ ಇವರು, ಕೆಲ ಸಮಯ ಹೂವಿನ ವ್ಯಾಪಾರಿಯೊಬ್ಬರಲ್ಲಿ ಲೆಕ್ಕಿಗನಾಗಿ ಕೆಲಸಕ್ಕೆ ಸೇರಿದರು. ನಂತರ 2002ರಿಂದ 2005ರವರೆಗೆ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕಾರ್ಯ ನಿರ್ವಹಿಸಿದರು.

ಪದವಿ ಶಿಕ್ಷಣ ಪಡೆದರೂ, ಇಂಗ್ಲಿಷ್ ಭಾಷೆ ಮತ್ತು ಕಂಪ್ಯೂಟರ್​ನಲ್ಲಿ ವೃತ್ತಿಗೆ ಪೂರಕವಾದ ಜ್ಞಾನ ಹೊಂದಲು ಸಾಧ್ಯವಾಗಲಿಲ್ಲ. ಹಾಗಾಗಿ ಹಗಲಿನಲ್ಲಿ ಕೆಲಸ ಮಾಡಿ ರಾತ್ರಿಯಲ್ಲಿ ಸ್ನೇಹಿತನ ಮನೆಯಲ್ಲಿ ಕಂಪ್ಯೂಟರ್ ಅಭ್ಯಾಸ ಮಾಡುತ್ತಿದ್ದರು. ಮೆಡಿಕಲ್ ರೆಪ್ರೆಸೆಂಟೇಟಿವ್ ಕೆಲಸದಲ್ಲಿ ಜೀವನ ನಿರ್ವಹಣೆಗೆ ತೊಂದರೆ ಏನೂ ಇರಲಿಲ್ಲ. ಆದರೆ ತಮ್ಮ ಶೈಕ್ಷಣಿಕ ದಿನಗಳಲ್ಲಿ, ಸಹಪಾಠಿಗಳು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕಂಪ್ಯೂಟರ್ ಕಲಿಯುತ್ತಿದ್ದಾರೆ. ಬಡತನದಿಂದಾಗಿ ತಮಗೆ ಆ ಅವಕಾಶ ಸಿಗದೆ ಪರಿತಪಿಸಿದ್ದನ್ನು ನೆನೆದು, ನನ್ನಂತೆ ಕಷ್ಟಪಡುತ್ತಿರುವ ಗ್ರಾಮೀಣ ಪ್ರದೇಶದ ಹಾಗೂ ಬಡ ವಿದ್ಯಾರ್ಥಿಗಳಿಗೆ ಏನಾದರೂ ಅನುಕೂಲ ಮಾಡಬೇಕು ಎಂಬ ತುಡಿತ ಅವರದಾಗಿತ್ತು. ಒಂದೊಮ್ಮೆ ಅವರು ಯಾರಿಂದಲೋ ಅವಮಾನಕ್ಕೆ ಒಳಗಾಗುವ ಸಂದರ್ಭ ಎದುರಾಯಿತು. ಅದರಿಂದ ನಿರಾಶರಾಗದೆ, ಅದನ್ನೇ ಛಲವಾಗಿ ಸ್ವೀಕರಿಸಿದರು. ಅವರಿವರ ಕೈಕೆಳಗೆ ದುಡಿಯುವ ಬದಲು ಏನಾದರೂ ಸ್ವಂತ ಉದ್ಯೋಗ ಮಾಡಬೇಕು.

ಅದರಿಂದ ಸಮಾಜಕ್ಕೂ ಉಪಯೋಗ ಆಗಬೇಕು ಎಂದು ಯೋಚಿಸಿದರು. ಆಗ ಹೊಳೆದದ್ದೇ ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸಬೇಕು ಎನ್ನುವುದು. ಇದನ್ನು ಕೇಳಿದ ಮನೆಯವರು, ಸ್ನೇಹಿತರು ಇರುವ ಕೆಲಸ ಬಿಟ್ಟು ಇದೆಂಥ ಹುಚ್ಚುತನ ಎಂದರು. ಆದರೆ, ನಟರಾಜ್ ಗೌಡರ ನಿರ್ಧಾರ ಬದಲಾಗಲಿಲ್ಲ. ಗೆಳೆಯ ಎಚ್.ಕೆ.ರಮೇಶ್ ಜತೆಗೂಡಿ ಕಂಪ್ಯೂಟರ್ ತರಬೇತಿ ಸಂಸ್ಥೆ ಆರಂಭಿಸಿಯೇ ಬಿಟ್ಟರು. ಪುಟ್ಟದಾಗಿ ಪ್ರಾರಂಭವಾದ ಕೇಂದ್ರ ಇಂದು ‘ಬಾಲ್ಕ್’ ಹೆಸರಿನೊಂದಿಗೆ ರಾಜ್ಯಾದ್ಯಂತ ವಿಸ್ತಾರಗೊಂಡು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ನೀಡುತ್ತಿದೆ.

ಸ್ವಾಮಿ ವಿವೇಕಾನಂದರ ಪ್ರೇರಣೆ

ನನ್ನ ಈ ಯಶಸ್ಸಿಗೆ ಕಾಯಕ ನಿಷ್ಠೆಗೆ ಮೂವರು ಮಹಾತ್ಮರು ಪ್ರೇರಣೆಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಪ್ರಭಾವ ನನ್ನ ಮೇಲೆ ಬಹಳ ಇದೆ. ಅವರು ಹೇಳಿದಂತೆ ‘ನೀನೇ ನಿನ್ನ ಭವಿಷ್ಯದ ಶಿಲ್ಪಿ’ ಸಾಲಿನಂತೆ ಕಠಿಣ ಶ್ರಮದಿಂದಾಗಿ ನನ್ನ ಭವಿಷ್ಯವನ್ನು ನಾನೇ ರೂಪಿಸಿಕೊಂಡಿರುವೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವದಂತೆ ನಾನು ಮಾಡುವ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತ ಅದರಲ್ಲೇ ತೃಪ್ತಿ ಕಾಣುತ್ತಿದ್ದೇನೆ. ರಾಷ್ಟ್ರಕವಿ ಕುವೆಂಪು ಅವರ ಗೀತೆಯ ‘ನೇಗಿಲ ಕುಲದೊಳು ಅಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಸಾಲುಗಳಂತೆ ನನ್ನ ಕೆಲಸವೇ ಕರ್ಮ ಮತ್ತು ಧರ್ಮ ಎಂದು ಭಾವಿಸಿದ್ದೇನೆ ಎನ್ನುತ್ತಾರೆ ಎ.ಎನ್.ನಟರಾಜ್ ಗೌಡ.

ಮುಂದಿನ ಗುರಿಗಳು

ಬಾಲ್ಕ್ ಮೂಲಕ ಮುಂದಿನ 5 ವರ್ಷಗಳಲ್ಲಿ 15 ಲಕ್ಷ ವಿದ್ಯಾರ್ಥಿಗಳನ್ನು ತಲುಪುವ ಹಾಗೂ 5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದೆ. ಜತೆಗೆ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಬಾಲ್ಕ್ ಶಾಖೆಗಳ ವಿಸ್ತರಣೆ. ಹಾಗೆಯೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ವಿಸ್ತರಿಸುವ ನಿಟ್ಟಿನಲ್ಲಿ ನಟರಾಜ್ ಗೌಡ ಕಾರ್ಯಪ್ರವೃತ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಸಿಎಸ್​ಆರ್ ಸಹಕಾರದೊಂದಿಗೆ ‘ಬಾಲ್ಕ್ ಸ್ಕಿಲ್ ಡೆವಲಪ್ಮೆಂಟ್ ಯೂನಿವರ್ಸಿಟಿ ಆರಂಭಿಸುವುದು. ಅದರ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್ ಸೇರಿ ಕೈಗಾರಿಕೆಗೆ ಪೂರಕವಾದ ಕೌಶಲ ಒದಗಿಸುವುದು.

ಬಾಲ್ಕ್ ಹೆಸರು ಹೇಗೆ ಬಂತು

ಎ.ಎನ್.ನಟರಾಜ್ ಗೌಡ ಅವರೇ ಹೇಳುವಂತೆ ಬಾಲ್ಕ್ ತರಬೇತಿ ಕೇಂದ್ರ ಆರಂಭಿಸುವಾಗ ಮನೆಯವರ ಹೆಸರನ್ನೋ, ದೇವರ ಹೆಸರನ್ನೊ ಇಡಬಹುದಿತ್ತು. ಆದರೆ ನನ್ನ ಉದ್ದೇಶ ಈ ತರಬೇತಿ ಕೇಂದ್ರವನ್ನು ದೇಶದ ಉದ್ದಗಲಕ್ಕೂ ಪರಿಚಯಿಸಬೇಕು ಎಂಬುದು. ಆ ಮಹದಾಶಯ ದೊಂದಿಗೆ ‘ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಆಂಡ್ ಕಮ್ಯೂನಿಕೇಷನ್’ (ಬಾಲ್ಕ್) ಹೆಸರನ್ನು ಆಯ್ಕೆ ಮಾಡಿದೆ. ಅದು ಸಾರ್ಥಕ ಹಾದಿಯಲ್ಲಿ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ರಾಜ್ಯಾದ್ಯಂತ 62 ಶಾಖೆಗಳು

ಹಂತ ಹಂತವಾಗಿ ವಿವಿಧೆಡೆಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿದರು. 2007ರಲ್ಲಿ ವಿಜಯನಗರದಲ್ಲಿ 10ನೇ ಶಾಖೆ ತೆರೆದರು. ಇಲ್ಲಿಗೆ 21 ವರ್ಷಗಳಾಗಿದ್ದು, ರಾಜ್ಯಾದ್ಯಂತ ಬಾಲ್ಕ್ 62 ಶಾಖೆಗಳನ್ನು ಹೊಂದಿದೆ. ಈವರೆಗೂ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಇಂಗ್ಲಿಷ್ ಭಾಷೆ ಸೇರಿ ತಂತ್ರಜ್ಞಾನ ಆಧಾರಿತ ವಿವಿಧ ಕೌಶಲ ತರಬೇತಿ ನೀಡುತ್ತಾ ಸಾಗಿದೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ಕಾಸಿಯಾ, ಎಫ್​ಕೆಸಿಸಿಐ, ಬಿಪಿಒ, ಐಟಿ-ಬಿಟಿ ಸೇರಿ ಪ್ರಸಿದ್ಧ ಖಾಸಗಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಉದ್ಯೋಗ ಮೇಳ ಆಯೋಜಿಸುವ ಮೂಲಕ 60 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ ಹೆಗ್ಗಳಿಗೆ ಬಾಲ್ಕ್ ಸಂಸ್ಥೆಗೆ ಸಲ್ಲುತ್ತದೆ. ಪ್ರಸ್ತುತ ರಾಜ್ಯಾದ್ಯಂತ ಇರುವ ಬಾಲ್ಕ್ ಕೇಂದ್ರಗಳಲ್ಲಿ ನಿತ್ಯ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

ಧನ್ಯವಾದಗಳು

ಉತ್ತಮ ಸಂಸ್ಕಾರ, ಶಿಕ್ಷಣ, ನಿರಂತರ ಪ್ರೋತ್ಸಾಹ ನೀಡಿದ ತಾಯಿ ಶಾಂತಮ್ಮ, ವ್ಯವಹಾರದಲ್ಲಿ ಕೈಜೋಡಿಸಿ ಜತೆಯಲ್ಲಿ ಸಾಗುತ್ತಿರುವ ಪತ್ನಿ, ಬಾಲ್ಯದಿಂದಲೂ ನನ್ನೆಲ್ಲ ಕಾರ್ಯಗಳಿಗೂ ಬೆಂಬಲ ನೀಡಿದ ಸಹೋದರರು ಹಾಗೂ ಯಶಸ್ಸಿನಲ್ಲಿ ಭಾಗಿಯಾಗಿರುವ ಸ್ನೇಹಿತರಿಗೆ ಧನ್ಯವಾದಗಳು.

ಶಿಕ್ಷಣಕ್ಕೆ ಪೂರಕ ಸಲಹೆ

ಬಾಲ್ಕ್​ನಲ್ಲಿ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಹಿನ್ನೆಲೆ ಪರಿಗಣಿಸಿ ಯಾವ ಕೋರ್ಸ್ ಮಾಡಿದರೆ ಉದ್ಯೋಗ ಪಡೆಯಬಹುದೋ ಅದಕ್ಕೆ ಪೂರಕವಾದ ಕೋರ್ಸ್​ಗಳ ಆಯ್ಕೆಗೆ ಸಲಹೆ ನೀಡಲಾಗುತ್ತದೆ. ಬೇಸಿಕ್ ಕಂಪ್ಯೂಟರ್ ಕೋರ್ಸ್, ಟ್ಯಾಲಿ, ಡಿಟಿಪಿ, ಗ್ರಾಫಿಕ್ ಡಿನೈನ್, ಡಿಜಿಟಲ್ ಮಾರ್ಕೆಟಿಂಗ್, ಅನಿಮೇಷನ್, ಫೋಟೋ ಶಾಪ್ ಸೇರಿ ಪೂರಕ ಕೋರ್ಸ್​ಗಳನ್ನು ಕಲಿಸಲಾಗುತ್ತದೆ. ಕೃತಿಕ ಬುದ್ಧಿಮತ್ತೆ ಸೇರಿ ಆಯಾ ಸಂದರ್ಭಕ್ಕೆ ಪರಿಚಯವಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಹೊಸ ಕೌಶಲ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಪುಸ್ತಕ ಪ್ರಕಟಣೆ

ಬೆಂಗಳೂರಿನ ಟೌನ್​ಹಾಲ್​ನಲ್ಲಿ ಬಾಲ್ಕ್ ಸಂಕಲ್ಪ 2019ರ ವತಿಯಿಂದ ವಿವೇಕಾನಂದ ಹಾಗೂ ಕುವೆಂಪು ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು. ಶ್ರದ್ಧೆ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ, ಇವುಗಳ ಜತೆಗೆ ಸತತ ಪ್ರಯತ್ನ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದ ಮುನ್ನಡೆದಾಗ ಯಶಸ್ಸು ನಿಶ್ಚಿತ. ಆದರೆ ಗುರಿ ತಲುಪುವ ಮುನ್ನ ಏನೇ ಕಷ್ಟ ಬಂದರೂ ಹಿಂದೆ ಸರಿಯುವುದಿಲ್ಲ ಎಂಬ ದೃಢ ವಿಶ್ವಾಸ ಹೊಂದಬೇಕಷ್ಟೆ. ಈ ಅಂಶಗಳೊಂದಿಗೆ ಬಾಲ್ಕ್ ಸ್ಥಾಪಿಸಿದ ನಟರಾಜ್ ಗೌಡ ಅವರು, ತಮ್ಮ ಜೀವನ, ಶಿಕ್ಷಣ, ಉದ್ಯೋಗ ಈ ಹಂತಗಳಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿ ಗಳಿಸಿದ ಯಶಸ್ಸು ಕುರಿತು ಇತರರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸ್ವ ಅನುಭವಗಳನ್ನು ಆಧರಿಸಿ ‘ಪರಿಶ್ರಮ ಮತ್ತು ಯಶಸ್ಸು’ ಎಂಬ ಪುಸ್ತಕ ಬರೆದು ಪ್ರಕಟಿಸಿದ್ದಾರೆ.

ತಾಯಿಯ ಆಶೀರ್ವಾದ ಪತ್ನಿಯ ಸಹಕಾರ

ಬಾಲ್ಕ್ ಕೇಂದ್ರ ಆರಂಭಿಸುವಾಗ ಮೊದಲು ಎದುರಾಗಿದ್ದು ಆರ್ಥಿಕ ಸಂಕಷ್ಟ. ಆ ಸಂದರ್ಭದಲ್ಲಿ ತಾಯಿ ಶಾಂತಮ್ಮ ಅವರು ಒತ್ತಾಸೆಯಾಗಿ ನಿಂತರು. ತಮ್ಮ ಒಡವೆಗಳನ್ನು ಅಡವಿಟ್ಟು ಹಣ ತಂದು ಕೊಟ್ಟರು. ಬ್ಯಾಂಕ್​ನಿಂದ ಸಾಲ ಪಡೆದೆ, ಜತೆಗೆ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದರಿಂದ ಸಂಬಳದಲ್ಲಿ ಕೂಡಿಟ್ಟಿದ್ದ ಹಣ ಹಾಗೂ ಗೆಳೆಯ ರಮೇಶ್ ಅವರಿಂದಲೂ ನೆರವು ಹೀಗೆ ವಿವಿಧ ಮೂಲಗಳಿಂದ ಬಂದ ನೆರವಿನೊಂದಿಗೆ ಕೇಂದ್ರ ಆರಂಭಿಸಿದೆ. ಹೀಗೆ ತಾಯಿಯ ಆಶೀರ್ವಾದದೊಂದಿಗೆ ಆರಂಭವಾಯಿತು. ಇಂದು ವಕೀಲೆಯೂ ಆಗಿರುವ ಪತ್ನಿ, ಕೇಂದ್ರದ ಬೆಳವಣಿಗೆಗೆ ಕೈಜೋಡಿಸಿದ್ದಾರೆ. ನಿರ್ದೇಶಕರಾಗಿ ಎಲ್ಲ ವ್ಯವಹಾರಗಳನ್ನು ನಿರ್ವಹಿಸುತ್ತ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ.

ಶ್ರದ್ಧೆ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮಗಳ ಜತೆಗೆ ಸತತ ಪ್ರಯತ್ನ ಮತ್ತು ಸಕಾರಾತ್ಮಕ ದೃಷ್ಟಿಕೋನ ಇದ್ದಾಗ ಯಶಸ್ಸು ಸಾಧ್ಯ. ಇದೇ ರೀತಿಯ ಶ್ರಮದಿಂದಾಗಿ ಎ.ಎನ್. ನಟರಾಜಗೌಡ ಬಾಲ್ಕ್ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. | ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ,  ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು ಕೌಶಲ್ಯಾಭಿವೃದ್ಧಿ, ವೃತ್ತಿ ಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನ ಸಂಸ್ಥೆ ಬಾಲ್ಕ್ ಮೂಲಕ ಎ.ಎನ್. ನಟರಾಜಗೌಡ ಅವರು ಮಾಡುತ್ತಿರುವ ಕಾರ್ಯ ಯುವ ಸಮುದಾಯಕ್ಕೆ ಬೆಳಕು ನೀಡಲಿ ಎಂದು ಶುಭ ಹಾರೈಸುವೆ. | ಸಿದ್ದರಾಮಯ್ಯ ಮುಖ್ಯಮಂತ್ರಿ ನಟರಾಜಗೌಡ ಸ್ಥಾಪಿಸಿರುವ ಬಾಲ್ಕ್ ಸಂಸ್ಥೆಯಿಂದ ಯುವ ಸಮುದಾಯಕ್ಕೆ ಕೌಶಲ್ಯ ಆಧಾರಿತ ತರಬೇತಿ ಹಾಗೂ ಉದ್ಯೋಗ ಮಾರ್ಗದರ್ಶನ ಪಡೆಯಲು ಸಹಕಾರಿಯಾಗಿದೆ. ಇದರಿಂದ ಇನ್ನಷ್ಟು ಯುವಜನರಿಗೆ ಅನುಕೂಲ ಆಗಲಿ ಎಂದು ಆಶಿಸುವೆ. | ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

ಬಾಲ್ಕ್ ಆರಂಭದ ದಿನಗಳು

2004ರ ಅ.2ರಂದು ‘ಭಾರತ್ ಇನ್​ಸ್ಟಿಟ್ಯೂಟ್ ಆಫ್ ಇನ್ಪಾಮೇಷನ್ ಟೆಕ್ನಾಲಜಿ (ಬಿಐಐಟಿ) ಹೆಸರಿನಲ್ಲಿ ಸುಂಕದಕಟ್ಟೆ ಮುಖ್ಯರಸ್ತೆಯಲ್ಲಿನ ಜಿ.ಟಿ.ಕಾಂಪ್ಲೆಕ್ಸ್​ನಲ್ಲಿ ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಬಾಡಿಗೆಗೆ ಪಡೆದ ನಟರಾಜ್ ಗೌಡ ಅವರು, ತರಬೇತಿ ಕೇಂದ್ರ ಆರಂಭಿಸಿದರು. ಮೊದಲಿಗೆ ಕಡಿಮೆ ವಿದ್ಯಾರ್ಥಿಗಳಿದ್ದರೂ ನಂತರದಲ್ಲಿ ಸಂಖ್ಯೆ ಹೆಚ್ಚಿತು. ಆಗ ಕೇಂದ್ರವನ್ನು ಇನ್ನಷ್ಟು ವಿಸ್ತರಿಸಿದರು. ಅಷ್ಟರಲ್ಲಾಗಲೇ ಬಿಐಐಟಿ ಹೆಸರಿನಲ್ಲಿ ಹಲವು ಸಂಸ್ಥೆಗಳು ಇದ್ದವು. ಹಾಗಾಗಿ ‘ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಆಂಡ್ ಕಮ್ಯೂನಿಕೇಷನ್’(ಬಾಲ್ಕ್) ಹೆಸರಿನಲ್ಲಿ ಅರ್ಜಿ ಸಲ್ಲಿಸಿದರು. ಅದಕ್ಕೆ 2006ರಲ್ಲಿ ಟ್ರೇಡ್​ವಾರ್ಕ್ ದೊರೆಯಿತು. ಆ ವೇಳೆಗಾಗಲೇ ಮೆಡಿಕಲ್ ರೆಪ್ರೆಸೆಂಟೇಟಿವ್ ಕೆಲಸ ತೊರೆದು ಪೂರ್ಣಪ್ರಮಾಣದಲ್ಲಿ ‘ಬಾಲ್ಕ್’ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ನಟರಾಜ್ ಗೌಡ ಅಲ್ಲಿಂದ ಹಿಂದೆ ನೋಡಿದ್ದೇ ಇಲ್ಲ. ಒಂದೊಂದು ಶಾಖೆ ಆರಂಭವೂ ಒಂದೊಂದು ಮೈಲಿಗಲ್ಲಾದವು.

ಉದ್ಯೋಗದಾತ

ಬಾಲ್ಕ್ ಸಂಸ್ಥೆಯು ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುತ್ತಿದ್ದು, ಸಾವಿರಾರು ಮಂದಿಗೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಒದಗಿಸಿದೆ. ಅದಷ್ಟೇ ಅಲ್ಲದೆ ಸ್ವತಃ ಬಾಲ್ಕ್ ಸಂಸ್ಥೆಯು ಫ್ಯಾಕಲ್ಟಿ ಸೇರಿ ನೂರಾರು ಮಂದಿಗೆ ಉದ್ಯೋಗ ನೀಡಿದೆ. ಸಂಸ್ಥೆಯಲ್ಲಿ 450ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಬಾಲ್ಕ್ ಸ್ವತಃ ಉದ್ಯೋಗದಾತ ಸಂಸ್ಥೆಯಾಗಿದೆ. ಕೇಂದ್ರದಲ್ಲಿ ಒಮ್ಮೆ ದಾಖಲಾದರೆ ಕೋರ್ಸ್ ಅವಧಿ ಪೂರ್ಣಗೊಂಡ ನಂತರವೂ 2 ವರ್ಷಗಳ ಕಾಲ ಅಭ್ಯಾಸಕ್ಕೆ ಅವಕಾಶ ಇದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು 10 ವರ್ಷಗಳ ವರೆಗೆ ಕೇಂದ್ರ ನಡೆಸುವ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ರಾಜಕೀಯ ನಂಟು

ಪದವಿ ವ್ಯಾಸಂಗ ಮಾಡುವಾಗಲೇ ಎ.ಎನ್.ನಟರಾಜ್ ಗೌಡ ಅವರು ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಜತೆಗೆ ರಕ್ತದಾನ ಶಿಬಿರ, ಕ್ರೀಡಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಆಶುಭಾಷಣ ಸೇರಿ ಕಾಲೇಜಿನಲ್ಲಿ ಆಯೋಜಿಸುತ್ತಿದ್ದ ವಿವಿಧ ಅಂತರ ಕಾಲೇಜು ಸ್ಪರ್ಧೆಗಳ ನೇತೃತ್ವ ವಹಿಸುತ್ತಿದ್ದರು. ಇದು ಅವರಿಗೆ ರಾಜಕೀಯ ನಂಟು ಬೆಳೆಯಲು ಸೇತುವೆ ಕಲ್ಪಿಸಿತು. ಹಾಗಾಗಿ ವಿದ್ಯಾರ್ಥಿದಿಸೆಯಲ್ಲಿರುವಾಗಲೇ 1998-99ರಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಸದಸ್ಯನಾಗುವ ಮೂಲಕ ರಾಜಕೀಯ ಪ್ರವೇಶವಾಯಿತು. ನಂತರದಲ್ಲಿ ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ನಟರಾಜ್ ಗೌಡರು 2008ರಲ್ಲಿ ಯುವ ಕಾಂಗ್ರೆಸ್, ನಂತರ ಜಿಲ್ಲಾ ಕಾಂಗ್ರೆಸ್, ಬಳಿಕ ರಾಜ್ಯಮಟ್ಟದ ಕಾಂಗ್ರೆಸ್​ನ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಾಗಿ, ಆ ನಂತರ ಪಕ್ಷದ ಮಾಧ್ಯಮ ವಿಭಾಗದ ಸಂಚಾಲಕರಾಗಿ, ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ, ಪ್ರಚಾರ ಸಮಿತಿ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಕಳೆದ 10 ವರ್ಷಗಳಿಂದ ಪಕ್ಷದ ಮುಖ್ಯ ವಕ್ತಾರರಾಗಿದ್ದು, ಹಿರಿಯ ನಾಯಕರ ನಿಕಟ ಒಡನಾಟ ಹೊಂದಿರುವ ನಟರಾಜ್ ಗೌಡ ಅವರು ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಕೌಶಲ್ಯದ ಕೊರತೆ ಇರುವವರು, ಬಡ ಹಾಗೂ ಗ್ರಾಮೀಣ ಭಾಗದ ಜನರಿಗೆ ಇಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಕೌಶಲ ತರಬೇತಿ ಲಭ್ಯವಿದೆ. ಜತೆಗೆ ಉದ್ಯೋಗ ಭರವಸೆಯೂ ಇದೆ. ಹಾಗಾಗಿ ತರಬೇತಿ ಜತೆಗೆ ಉದ್ಯೋಗವನ್ನೂ ಪಡೆಯಲು ‘ಬಾಲ್ಕ್’ ಭರವಸೆಯ ಕೇಂದ್ರವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ತರಬೇತಿ ಲಭ್ಯ ಇರುವುದರಿಂದ ವಿದ್ಯಾರ್ಥಿಗಳು ಇದನ್ನು ಪ್ರಥಮ ಆಯ್ಕೆಯಾಗಿ ಮಾಡಿಕೊಂಡಿದ್ದಾರೆ. | ಎ.ಎನ್. ನಟರಾಜ್ ಗೌಡ ಸ್ಥಾಪಕರು, ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಆಂಡ್ ಕಮ್ಯೂನಿಕೇಷನ್ (ಬಾಲ್ಕ್) ಶಿಸ್ತಿನ ಜೀವನಶೈಲಿ, ಸಮಯದ ಸಮರ್ಪಕ ಬಳಕೆಯ ಜತೆಗೆ ವೃತ್ತಿಗೆ ಪೂರಕವಾದ ಕೌಶಲ, ಭಾಷಾ ಜ್ಞಾನವನ್ನು ತಿಳಿಸುವ ಮಹತ್ವದ ಬಾಲ್ಕ್ ಸಂಸ್ಥೆ ಲಕ್ಷಾಂತರ ಯುವಜನರಿಗೆ ದಾರಿದೀಪವಾಗಿದೆ. | ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಬಾಲ್ಕ್ ಸಂಸ್ಥೆಯು ವಿದ್ಯಾರ್ಥಿಗಳ ವೖತ್ತಿಜೀವನ ಮತ್ತು ಅವರ ಭವಿಷ್ಯದ ನಿಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡುವುದು ನನ್ನ ಜವಾಬ್ದಾರಿ. ಆಡಳಿತಾತ್ಮಕ ಕೆಲಸಗಳೊಂದಿಗೆ ವಿದ್ಯಾರ್ಥಿಗಳಿಗೆ ಸೂಕ್ತ ವೖತ್ತಿಪರ ಕೌನ್ಸೆಲಿಂಗ್ ನೀಡುವುದು, ಅವರ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಕೋರ್ಸ್ ಗಳನ್ನುಸೂಚಿಸುವುದು, ಗುಣಮಟ್ಟದ ಕೌಶಲ್ಯ ತರಬೇತಿಯನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ನಾವು ಕೈಗಾರಿಕೆಗಳ ಅಗತ್ಯತೆಗಳಿಗೆ ಅನುಗುಣವಾಗಿ ನಮ್ಮ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನವೀಕರಿಸುತ್ತೇವೆ. ಇದು ವಿದ್ಯಾರ್ಥಿಗಳಿಗೆ ಉದ್ಯಮದ ಇತ್ತೀಚಿನ ಪ್ರವೖತ್ತಿಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುತ್ತದೆ. ನಮ್ಮ ಪ್ರಮುಖ ಉದ್ದೇಶವು, ಯುವಕರು ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವುದು. ಈ ಮೂಲಕ, ನಮ್ಮ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಗೆ ಸಿದ್ಧರಾಗಿ ಹೊರಹೋಗುವಂತೆ ಖಚಿತಪಡಿಸುತ್ತೇವೆ. ಇದು ಕೇವಲ ವೈಯಕ್ತಿಕ ಬೆಳವಣಿಗೆಯಷ್ಟೇ ಅಲ್ಲದೆ, ಸಮಾಜದ ಒಟ್ಟಾರೆ ಅಭಿವೖದ್ಧಿಗೂ ಕೊಡುಗೆ ನೀಡುತ್ತದೆ.

| ಆಶಾ ನಟರಾಜ್ ಗೌಡ ನಿರ್ದೇಶಕರು, ಬಾಲ್ಕ್

ಗುಣಮಟ್ಟಕ್ಕೆ ಆದ್ಯತೆ

ಬಾಲ್ಕ್ ಸಂಸ್ಥೆ ಇಷ್ಟು ಎತ್ತರಕ್ಕೆ ಏರಲು ಮುಖ್ಯ ಕಾರಣ ಶಿಸ್ತು, ಸಮಯ ಪಾಲನೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿರುವುದು. ಇಲ್ಲಿಯ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಹಾಗಾಗಿ ಎಲ್ಲ ಶಾಖೆಗಳಲ್ಲಿ ಹಾಜರಾತಿ ಪುಸ್ತಕವನ್ನು ಬಹಳ ಜತನದಿಂದ ನಿರ್ವಹಿಸಲಾಗುತ್ತಿದೆ. ಇನ್ನು ವಿದ್ಯಾರ್ಥಿಗಳಿಗೆ ಅವರ ಜ್ಞಾನ ಮಟ್ಟವನ್ನು ಆಧರಿಸಿ ತರಬೇತಿ ನೀಡಲಾಗುತ್ತಿದ್ದು, ಇಲ್ಲಿ ಬರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದಾರೆ. ಅವರಿಗೆ ಇಂಗ್ಲಿಷ್ ಭಾಷೆ ಸಮಸ್ಯೆ ಇರುತ್ತದೆ. ಹಾಗಾಗಿ ಇಲ್ಲಿ ಇಂಗ್ಲಿಷ್ ಭಾಷೆ ಕಲಿಕೆಗೂ ಕೋರ್ಸ್ ಇದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ. ಅನುಭವಿ ಫ್ಯಾಕಲ್ಟಿಗಳಿಂದ ತರಬೇತಿ ಒದಗಿಸಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net