ಭವದ ಹೊಳೆಯಿಂದ ಪಾರಾಗಲು ಸಾಧನವೊಂದು ಅಗತ್ಯ

AllamaPrabhu
Published on
ಮಲ್ಲೇಪುರಂ ವೇಂಕಟೇಶ
ಸಾವಿನ ಕಲ್ಪನೆ ನಮಗೆ ಬೆರಗನ್ನು ತರುತ್ತದೆ. ವಿಜ್ಞಾನವು ಉಸಿರು ನಿಂತಾಗ ಸಾವು ಆಯಿತೆಂದು ಭಾವಿಸುತ್ತದೆ. ಇದು ವಿಜ್ಞಾನದ ಅಂತಿಮ ನಿರ್ಣಯ! ಆದರೆ, ವಿಜ್ಞಾನದ ಆಚೆ ಸಾವಿನ ಕಲ್ಪನೆಯನ್ನು ಕುರಿತು ಚಿಂತಿಸುವಾಗ, ಅನೇಕ ರಹಸ್ಯ ವಿಶೇಷಗಳು ಮೈತೆರೆದುಕೊಳ್ಳುತ್ತವೆ. ಸಾವು ದೇಹಕ್ಕೆ ಎಂಬುದನ್ನು ಸಾಮಾನ್ಯವಾಗಿ ಎಲ್ಲಾ ದರ್ಶನಗಳೂ ಒಪ್ಪುತ್ತವೆ. ಭಾರತದ ನಾಲ್ವರು ಮಹಾದಾರ್ಶನಿಕರಾದ ನಾಲ್ಕನೆಯ ಶತಮಾನದ ನಾಗಾರ್ಜುನ, ಒಂಬತ್ತನೆಯ ಶತಮಾನದ ಆಚಾರ್ಯ ಶಂಕರ ಭಗವತ್ಪಾದರು, ಹನ್ನೊಂದನೆಯ ಶತಮಾನದ ಅಭಿನವಗುಪ್ತಪಾದರು ಮತ್ತು ಹನ್ನೆರಡನೆಯ ಶತಮಾನದ ಅಲ್ಲಮಪ್ರಭು ದೇವರು- ಪಂಚಭೂತಗಳಿಂದ ಕೂಡಿರುವ ಈ ದೇಹವು ಒಂದೊಂದು ಅಂಶವನ್ನೇ ಕಳೆದುಕೊಂಡಂತೆ ಜಡವಾಗುತ್ತದೆಂದು ಹೇಳುತ್ತಾರೆ. ದೇಹದ ಉಸಿರು ವಾಯುತತ್ತ್ವದಲ್ಲೂ ಬಿಸಿಯು ಅಗ್ನಿತತ್ತ್ವದಲ್ಲೂ ಶೈತ್ಯವು ಜಲತತ್ತ್ವದಲ್ಲಿಯೂ ದೇಹಸ್ಥವು ಪೃಥ್ವಿತತ್ತ್ವದಲ್ಲೂ ಶಬ್ದಗುಣವು ಆಕಾಶತತ್ತ್ವದಲ್ಲೂ ತದ್ಗತಗೊಳ್ಳುತ್ತವೆ. ಇದನ್ನೇ ವೇದಾಂತಿಗಳು ‘ಪಂಚೀಕರಣ’ ಎಂಬ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತಾರೆ.

ಶರಣರೂ ಅನುಭಾವಿಗಳೂ ಸಾವಿಗೆ ಅಂಜುವುದಿಲ್ಲ. ಸಾವು ಅವರಿಗೊಂದು ಲೀಲೆ. ಆದರೆ, ಮುಕ್ತಾಯಿಗೆ ಇದು ತಿಳಿಯದೆ ಹೋಗಿದೆ. ಅವಳು ಇನ್ನೂ ‘ಭವಿ’ಯ ಸ್ಥಿತಿಯಲ್ಲಿ ಇದ್ದಾಳೆ. ಆ ಬಗೆಯ ಭವಿಸ್ಥಿತಿಯಲ್ಲಿ ಇರುವವರಿಗೆ ಸಾವಿನ ಪರಿ ತಿಳಿಯಲಾರದು. ಅಲ್ಲಮನೇ ತನ್ನೊಂದು ವಚನದಲ್ಲಿ :

ಸತ್ತು ಹುಟ್ಟಿ, ಕೆಟ್ಟವರೆಲ್ಲರೂ/ ದೇವಲೋಕಕ್ಕೆ ಹೋದರೆಂಬ/ ಬಾಲಭಾಷೆಯ ಪೇಳಲಾಗದು-ಸಾಯದ ಮುನ್ನ ಸ್ವಯವನರೆಡೆ/ ದೇವನೊಲಿವ ನಮ್ಮ ಗುಹೇಶ್ವರ (ಅಲ್ಲಮನ ವಚನ ಚಂದ್ರಿಕೆ -606) ಅಲ್ಲಮನ ಈ ವಚನದಲ್ಲಿ ಎರಡು ಸಂಗತಿಗಳಿವೆ. ಒಂದು ಸಾಮಾನ್ಯ ತಿಳಿವಳಿಕೆ; ಮತ್ತೊಂದು ಆನುಭಾವಿಕ ತಿಳಿವಳಿಕೆ. ಲೋಕವು ಸತ್ತವರನ್ನೂ ಕೆಟ್ಟುಹೋದವರನ್ನು ಸದ್ಗತಿ ಸಂದವರೆಂದೂ ಪೂರ್ವಾರ್ಧದ ಮೊದಲ ಅಂಶ ತಿಳಿಸುತ್ತದೆ. ಇನ್ನು ಉತ್ತರಾರ್ಧದಲ್ಲಿ ‘‘ತನ್ನನ್ನು ತಾನು ತಿಳಿದರೆ’’ ಸಾವೆಂಬುದು ಇಲ್ಲವಾಗುತ್ತದೆ. ಅಲ್ಲಿ ದೇವತತ್ತ್ವವು ಮೈದೋರುತ್ತದೆ. ಅಂಗವು ಲಿಂಗವಾಗುವುದು, ಶೂನ್ಯವು ನಿಶ್ಶೂನ್ಯವಾಗುವುದು, ಭವವು ಅಭವವಾಗುವುದು. ಇದು ಲೋಕಭಾವದಲ್ಲಿ ಇರುವವರಿಗೆ ತಿಳಿಯಲಾಗದು; ಆದರೆ, ದೇವಭಾವದಲ್ಲಿರುವವರಿಗೆ ತಿಳಿಯುತ್ತದೆ. ನಾವೆಲ್ಲರೂ ಮುಕ್ತಾಯಿಯು ಭಾವಿಸುತ್ತಿರುವ ಲೋಕಭಾವದಲ್ಲಿಯೇ ಇದ್ದೇವೆ. ಹೀಗಾಗಿ, ದೇವಭಾವದ ನೆಲೆ ನಮಗೆ ಎಟುಕುತ್ತಿಲ್ಲ. ಇದೊಂದು ಸಂಕಟದ ಪರಿ. ಭವಿತ್ತ್ವದಿಂದ ಭಕ್ತತತ್ತ್ವದ ಕಡೆ ನಾವು ಹೊರಳಿದರೆ ದೇವಭಾವದ ನೆಲೆ ತಿಳಿಯುತ್ತದೆ!

ನಾವು ಭವದ ಹೊಳೆಯಲ್ಲಿ ಸಿಲುಕಿಕೊಂಡಿದ್ದೇವೆ. ಇದರಿಂದ ನಾವು ಪಾರಾಗಬೇಕು. ನಾವು ಅದರಿಂದ ಪಾರಾಗಬೇಕಾದರೆ ಸಾಧನವೊಂದು ಬೇಕು. ಹೊಳೆಯನ್ನು ದಾಟುವವರು ಹರಿಗೋಲನ್ನು ಸಿದ್ಧಪಡಿಸಿಕೊಳ್ಳುತ್ತಾರಷ್ಟೆ. ಅದೇ ರೀತಿ ಕಮೇಂದ್ರಿಯಗಳನ್ನು ಪಕ್ಕಕ್ಕೆ ಸರಿಸಿ ಹೊರಗಿನ ಸಮಸ್ತಕ್ರಿಯೆಗಳನ್ನೆಲ್ಲಾ ತ್ಯಜಿಸಬೇಕಾಗುತ್ತದೆ. ಆಗ ಒಳಮಾರ್ಗದ ನೆಲೆ ತಿಳಿಯುತ್ತದೆ. ಸಾಧಕರು ಮನೋವಾಕ್ ಕಾಯ ಕ್ರಮಗಳಿಂದ ನಿಮರ್ುಕ್ತರಾಗಬೇಕು. ಅವುಗಳ ನೆಲೆಯನ್ನು ಸಾಧಕರು ಚೆನ್ನಾಗಿ ತಿಳಿಯಬೇಕು. ಮುಕ್ತಾಯಿಯು ಈ ದೃಷ್ಟಿಯಿಂದ ಮನೋವಾಕ್ ಕಾಯ ಕರ್ಮಗಳ ಬಗೆಗೆ ಅಲ್ಲಮನನ್ನು ಪ್ರಶ್ನಿಸುತ್ತಾಳೆ. ಈ ಪ್ರಶ್ನೆಗೆ ಅಲ್ಲಮನು ಸರಳವಾದ ಸಾಮತಿಯೊಂದಿಗೆ ಮುಕ್ತಾಯಿಗೆ ಹೀಗೆಂದು ಹೇಳುತ್ತಾನೆ.

ಬೆಂದ ನುಲಿಯಾಕಾರವಾಗಿಹು/ದೆಂದಡೆದು ನೆಯ್ವರ ಕೆಲಸಕೆ/ಬಂದುದುಂಟೇ? ಮರುಳೆ ಲಿಂಗಜ್ಞಾನವಹ್ನಿಯಲಿ | ಬೆಂದು ಹೋದೊಡಲುಗನು ಭಾವಿಸ/ಲೊಂದುವಿಲ್ಲದ ಬಯಲುಗನೊಳಿ/ನ್ನೊಂದು ಕಲ್ಪಿಸಲಾಗದೌ ಮುಕ್ತಾಯಿ ಕೇಳೆಂದ (ಪ್ರಭುಲಿಂಗಲೀಲೆ 12-19)

‘‘ನೂಲು ಬೆಂದು ಹೋಗಿದೆ. ಆದರೆ, ಆಕಾರ ಮಾತ್ರ ಕೆಟ್ಟಿಲ್ಲ. ಅದು ಆಕಾರದಲ್ಲಿ ಇದೆಯೆಂದ ಮಾತ್ರಕ್ಕೆ ಮಗ್ಗದವರ ಕೆಲಸಕ್ಕೆ ಬರುವುದುಂಟೆ? ಶರಣನು ಲಿಂಗಜ್ಞಾನವೆಂಬ ಬೆಂಕಿಯಲ್ಲಿ ಬೆಂದುಹೋದ ದೇಹವುಳ್ಳವನಾದ ಮೇಲೆ ಮರಳಿ ದೇಹರೂಪ ಪಡೆಯಲು ಸಾಧ್ಯವೆ? ಏನೂ ಇಲ್ಲದ ಬಯಲದೇಹಿಯಲ್ಲಿ ಮತ್ತೊಂದನ್ನು ಕಲ್ಪಿಸಬಾರದು’’ ಎಂದು ಅಲ್ಲಮನು ನುಡಿದನು. ಮುಕ್ತಾಯಿಯು ಅಲ್ಲಮನ ಮಾತುಗಳನ್ನು ಕೇಳುತ್ತ ಶಬ್ದಮುಗ್ಧಳಾದಳು. ಆಕೆಯ ಮನದ ಸಿಟ್ಟು ಮಾಯವಾಯಿತು. ಅವಳು ಸಮಾಧಾನದಿಂದ ಕೂಡಿದ ಧ್ಯಾನಸ್ಥಿತಿಯಲ್ಲಿ ನೆಲೆಸಿದಳು.

ನಿರಹಂಕಾರದ ತಿಳಿವಳಿಕೆ ಅವಳಲ್ಲಿ ಸೇರಿತು. ನಿತ್ಯಾನಂದ ನಿರ್ಮಳ ಭಾವಕ್ಕೆ ಮುಕ್ತಾಯಿ ಸೇರಿಕೊಂಡಳು. ಜಾಣನಾದವನು ಹಗ್ಗವನ್ನು ಹಿಡಿದು ಬೆಟ್ಟವನ್ನು ಏರುವಂತೆ, ಭಕ್ತಿಯ ತಂತ್ರವನ್ನು ಉಪದೇಶ ಮಾಡಿದ ಅಲ್ಲಮನ ಮಾತಿನ ಜಾಡನ್ನು ಮುಕ್ತಾಯಿ ಹಿಡಿದುಕೊಂಡಳು. ಆಕೆಯು ಬ್ರಹ್ಮರಂಧ್ರವನ್ನು ದಾಟಿ, ಮುಕ್ತಸ್ಥಿತಿಯ ಶಾಂತತೆಯಲ್ಲಿ ನಿಂತಳು. ಮುಕ್ತಾಯಿಯು ಭವದ ಮಾಯೆಯನ್ನು ಗೆದ್ದುಕೊಂಡಳು. ಶಿವಭಕ್ತಿಯ ಮೂಲಕ ಅಂಗದ ನೆಲೆಯಿಂದ ಲಿಂಗತತ್ತ್ವದ ನೆಲೆಗೆ ಅವಳು ಸಂದಳು. ಹುಟ್ಟು-ಸಾವುಗಳ ನೆಲೆಯಿಂದ ಪಾರಾಗುವ ಬಗೆಯನ್ನು ಪ್ರಭುದೇವನಿಂದ ತಿಳಿದ ಮೇಲೆ ಅವಳಲ್ಲಿದ್ದ ಎಲ್ಲಾ ಸಂಶಯಗಳು ತಿರೋಹಿತವಾದುವು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net