ಕರೊನಾಗೆ ತಾಯಿ ಬಲಿ, ಅಮ್ಮನ ಶವದ ಮುಂದೆಯೇ ಮದ್ವೆಯಾದ ಮಗ! ಕಣ್ಣೀರು ತರಿಸುತ್ತೆ ಈ ಸ್ಟೋರಿ

wedding
Published on

ತೆಲಂಗಾಣ: ಎಲ್ಲವೂ ಚೆನ್ನಾಗಿದ್ದರೆ ಆ ಮನೆಯಲ್ಲಿ ಮದುವೆ ಸಂಭ್ರಮ ಹಿಮ್ಮಡಿಗೊಳ್ಳುತ್ತಿತ್ತು. ತಾಯಿಯ ಆಶೀರ್ವಾದದೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಡುವ ಮಹದಾಸೆಯಲ್ಲಿ ಅಮೆರಿಕಾದಿಂದ ಮಗ ಸ್ವಗ್ರಾಮಕ್ಕೆ ಬಂದಿದ್ದ. ಅಷ್ಟರಲ್ಲಿ ವಿಧಿಯಾಟವೇ ಬೇರೆಯಾಗಿತ್ತು.

ಖುಷಿ ಖುಷಿಯಾಗಿ ಮದುವೆ ಆಗಬೇಕಿದ್ದ ಮಗ ತಾಯಿಯ ಶವದ ಮುಂದೆಯೇ ಸಪ್ತಪದಿ ತುಳಿದಿದ್ದಾನೆ. ಸತ್ತು ಮಲಗಿದ್ದ ಅಮ್ಮನ ಪಾದ ಮುಟ್ಟಿ ಕಣ್ಣೀರಿಡುತ್ತಲೇ ಆಶೀರ್ವಾದ ಪಡೆದಿದ್ದಾನೆ.

ಇಂತಹ ಮನಕಲಕುವ ದೃಶ್ಯ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್‌ಪೇಟ್‌ನಲ್ಲಿ ಸಂಭವಿಸಿದೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಎಂಬಾನಿಗೆ ಮೇ 21ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆಂದು ಅಮೆರಿಕಾದಿಂದ ತನ್ನೂರಿಗೆ ಮರಳಿದ್ದ. ಈ ನಡುವೆ ರಾಕೇಶ್​ನ ತಾಯಿ ​ಪಾಲ್ಪಾನೂರಿ ರೇಣುಕಾಗೆ ಕರೊನಾ ಸೋಂಕು ತಗುಲಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ರೇಣುಕಾ(49) ಬದುಕಲಿಲ್ಲ.

ಆಂಬುಲೆನ್ಸ್​ನಲ್ಲಿ ಗ್ರಾಮಕ್ಕೆ ಮೃತದೇಹ ತರಲಾಯಿತು. ಕಣ್ಣೀರಿಡುತ್ತಲೇ ರಾಕೇಶ್​​ ಅಮ್ಮನ ಶವದ ಮುಂದೆಯೇ ಮದುವೆ ನಿಶ್ಚಯವಾಗಿದ್ದ ಯುವತಿ ಜತೆ ಹಾರ ಬದಲಾಯಿಸಿಕೊಂಡು ಮದುವೆಯಾದ. ಇಂತಕ ಮನಕಲಕುವ ದೃಶ್ಯ ಕಂಡ ಜನರೂ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net