ಈರುಳ್ಳಿ ಸ್ಲೈಸ್​ ಹೆಚ್ಚು ಕೇಳಿದ್ದಕ್ಕೆ ಚಾಕುವಿನಿಂದ ಇರಿದ...

murder
Published on

ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಹಲ್ಲೆ-ಕೊಲೆಗಳಾಗುವುದು ಹೊಸದೇನಲ್ಲ. ಇಲ್ಲೂ ಅಂಥದ್ದೇ ಒಂದು ಕಾರಣಕ್ಕೆ ಗಲಾಟೆಯಾಗಿದೆ. ವಾಗ್ವಾದ ವಿಕೋಪಕ್ಕೆ ಹೋಗಿ ಕೊನೆಗೆ ಚೂರಿಯಿಂದ ಇರಿಯುವವರೆಗೂ ಪ್ರಕರಣ ಮುಂದುವರಿದಿದೆ. ಆದರೆ ಇಷ್ಟೆಲ್ಲ ಆಗಿರುವುದು ಬರೀ ಈರುಳ್ಳಿ ಸ್ಲೈಸ್​​ಗಾಗಿ..!

60 ವರ್ಷದ ಕಾರ್ಮಿಕ ಪವನ್ ಎಂಬಾತ ಚೂರಿ ಇರಿತಕ್ಕೆ ಒಳಗಾಗಿದ್ದು, 59 ವರ್ಷದ ರಿಯಾಸತ್ ಅಲಿ ಎಂಬಾತ ಆರೋಪಿ. ಚೂರಿಯಿಂದ ಇರಿದ ವ್ಯಕ್ತಿಯನ್ನು ಹಾಗೂ ಇರಿಯಲು ಬಳಸಿದ ಚೂರಿ ಎರಡನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೆಹಲಿಯ ಫತೇಪುರ್ ಬೇರಿ ಎಂಬಲ್ಲಿ ಈಗ ಘಟನೆ ನಡೆದಿದೆ.

ರಿಯಾಸತ್ ಅಲಿ ಮೂಲತಃ ಉತ್ತರ ಪ್ರದೇಶದವ. ಕಳೆದ 30 ವರ್ಷಗಳಿಂದ ದೆಹಲಿಯ ಫತೇಪುರ್​ ಬೇರಿಯಲ್ಲಿರುವ ಅಲಿ, ಫಾರ್ಮ್​ ಒಂದರಲ್ಲಿ ಕಾರ್ಮಿಕನಾಗಿದ್ದ. ಇಲ್ಲಿ ಡಿಸೆಂಬರ್ 8ರಂದು ಊಟದ ಸಂದರ್ಭದಲ್ಲಿ ಇನ್ನೊಬ್ಬ ಕಾರ್ಮಿಕ ಪವನ್ ಎಂಬಾತ ಸಲಾಡ್ ವಿತರಣೆ ವೇಳೆ ಈರುಳ್ಳಿ ಸ್ಲೈಸ್​ ಹೆಚ್ಚಿಗೆ ಕೇಳಿದ್ದ. ಇದರಿಂದ ಸಿಟ್ಟಾದ ಅಲಿ ಅಲ್ಲಿದ್ದ ಚಾಕುವಿನಿಂದ ಪವನ್​ಗೆ ಇರಿದು ಪರಾರಿಯಾಗಿ, ಇನ್ನೊಂದು ಫಾರ್ಮ್​ನಲ್ಲಿ ಚಾಕು ಎಸೆದು ತಲೆಮರೆಸಿಕೊಂಡಿದ್ದ. ಪವನ್​ ಇರಿತದಿಂದ ತೀವ್ರ ಗಾಯಗೊಂಡಿದ್ದರು. ಕೊನೆಗೂ ಪೊಲೀಸರು ಅಲಿಯನ್ನು ಪತ್ತೆ ಮಾಡಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net