More

    ಪತ್ನಿಗೂ ತಾಯಿಗೂ ಸದಾ ಜಗಳ- ನಾನು ಕುಗ್ಗಿ ಹೋಗಿದ್ದೇನೆ; ಸಮಸ್ಯೆ ಹೇಗೆ ಪರಿಹರಿಸಲಿ?

    ಪತ್ನಿಗೂ ತಾಯಿಗೂ ಸದಾ ಜಗಳ- ನಾನು ಕುಗ್ಗಿ ಹೋಗಿದ್ದೇನೆ; ಸಮಸ್ಯೆ ಹೇಗೆ ಪರಿಹರಿಸಲಿ?ಪ್ರಶ್ನೆ: ನಮ್ಮ ತಾಯಿಯವರಿಗೆ ಈಗ ೭೧ವರ್ಷ. ಕೆಲವರ್ಷಗಳ ಕೆಳಗೆ ನನ್ನ ತಂದೆಯವರು ನಿಧನರಾದ್ದರಿಂದ ನಮ್ಮ ತಾಯಿಯವರನ್ನು ನಮ್ಮ ಮನೆಗೇ ಕರೆತಂದೆ. ಆದರೆ ನನ್ನ ಹೆಂಡತಿಗೆ ನನ್ನ ತಾಯಿಯ ಜೊತೆ ಒಳ್ಳೆಯ ಸಂಬಂಧವಿರಲಿಲ್ಲ. ಅತ್ತೆ-ಸೊಸೆಯರಿಗೆ ಒಳಗೊಳಗೇ ಮುಸುಕಿನ ಗುದ್ದಾಟವಿದ್ದು ಕಳೆದವರ್ಷ ಅದು ಸ್ಪೋಟವಾಗಿ ಮನೆಯ ವಾತಾವರಣೆವೇ ಬದಲಾಗಿ ಹೋಗಿದೆ.

    ನನ್ನ ಹೆಂಡತಿ ” ನಿಮ್ಮನಿಗೆ ನಾನು ಅಡುಗೆ ಮಾಡಿಹಾಕುವುದಿಲ್ಲ ” ಎಂದು ತಗಾದೆ ತೆಗೆದಿದ್ದಾಳೆ. ಮನೆಯಲ್ಲಿ ೮೦% ಕೆಲಸವನ್ನು ನಮ್ಮ ತಾಯಿಯಿಂದ ಮಾಡಿಸುತ್ತಾಳೆ. ನಮ್ಮ ತಾಯಿ ಜಗಳವಾದಾಗಿನಿಂದ ತಿನ್ನುವುದನ್ನೇ ಕಡಿಮೆ ಮಾಡಿಬಿಟ್ಟಿದ್ದಾರೆ. ಒಳ್ಳೆ ಮಕ್ಕಳಹಾಗೆ ಚೂರು ಪಾರು ತಿಂದರೆ ತಿಂದರು, ಬಿಟ್ಟರೆ ಬಿಟ್ಟರು ಎನ್ನುವಂತೆ ಮಾಡುತ್ತಾರೆ.

    ನನಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ನಾನು ಆಫೀಸಿಗೆ ಹೋಗುವುದರಿಂದ ಮನೆಯಲ್ಲಿ ಹೆಚ್ಚುಕಾಲ ಇರಲಾಗುವುದಿಲ್ಲ. ನನ್ನ ತಾಯಿಯೋ ಸರಿಯಾಗಿ ತಿನ್ನದೇ ಬರೀ ಕೆಲಸ ಮಾಡಿಕೊಂಡು ನವೆಯುತ್ತಿದ್ದಾರೆ. ಈ ಸಮಸ್ಯೆಯನ್ನು ಹೇಗೆ ಪರಿಹರಿಸಲಿ ಎನ್ನುವುದೇ ತಿಳಿಯುತ್ತಿಲ್ಲ. ದಯವಿಟ್ಟು ನನ್ನ ತಾಯಿಯವರನ್ನು ಕಾಪಾಡಲು ಸಹಾಯ ಮಾಡಿ.

    ಉತ್ತರ: ತಾಯಿಯ ಬಗ್ಗೆ ಮಗನಾಗಿ ಆರೋಗ್ಯಕರವಾಗಿ ಮತ್ತು ಅಭಿಮಾನಪೂರ್ವಕವಾಗಿ ಚಿಂತಿಸುತ್ತಾ ಇರುವ ನಿಮಗೆ ಒಳಿತಾಗಲಿ. ಯಾವುದೇ ಸಮಸ್ಯೆಗೆ ಪರಿಹಾರ ನಾಲ್ಕೈದು ಮಾರ್ಗಗಳಲ್ಲಿ ಇರುತ್ತದೆ. ನಾವು ಒಂದೇ ಮಾರ್ಗವನ್ನು ಹಿಡಿದು ಯೋಚಿಸುವುದರಿಂದಲೂ, ಆ ಮಾರ್ಗ ನಿರೀಕ್ಷಿತ ಫಲವನ್ನು ಕೊಡದೇ ಇರುವುದರಿಂದಲೂ ಹೀಗೆ ಕಂಗಾಲಾಗುತ್ತೇವೆ. ನಿಮ್ಮ ತಾಯಿಯನ್ನು ಆರೋಗ್ಯವಾಗಿ ರಕ್ಷಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ನಿಮ್ಮಹೆಂಡತಿಗೆ ತನ್ನ ಅತ್ತೆಯನ್ನು ಕಂಡರಾಗದಿರುವುದಕ್ಕೆ ಅನೇಕ ಕಾರಣಗಳಿರಬಹುದು. ಅದನ್ನು ನಾನಿಲ್ಲಿ ಚರ್ಚಿಸುವುದಿಲ್ಲ.

    ಆದರೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಈ ಅತ್ತೆ-ಸೊಸೆಯ ಸಂಬಂಧವೆನ್ನುವುದು ಸುಮುಖವಾಗಿರಬೇಕಾದರೂ, ವಿಮುಖವಾಗಿರಬೇಕಾದರೂ ಇಬ್ಬರದ್ದೂ ಹೊಣೆಯೆನ್ನುವುದು ಬಹಳವಾಗಿರುತ್ತದೆ. ಯಾರಾದರೂ ಒಬ್ಬರೇ ಅನುಸರಿಸಿಕೊಂಡು ಹೋಗಲಿ ಎಂದು ನಿರೀಕ್ಷಿಸುವುದು ಅವೈಜ್ಞಾನಿಕವಾಗುತ್ತದೆ. ಈಗ ನಿಮ್ಮ ಮನೆಯಲ್ಲಿ ಒಬ್ಬರು ಸಂಬಂಧಕ್ಕೆ ವಿಮುಖರಾಗಿದ್ದಾರೆ. ಅದನ್ನು ನೀವೂ ಮತ್ತು ನಿಮ್ಮ ತಾಯಿಯೂ ಒಪ್ಪಿಕೊಂಡುಬಿಡಿ.

    ’ನಿಮ್ಮ ಹೆಂಡತಿಯನ್ನು ಸರಿಮಾಡುವುದಕ್ಕಾಗುವುದಿಲ್ಲ ’ ಎಂದು ನೀವೇ ಬರೆದಿದ್ದೀರಿ. ಅಂದಮೇಲೆ ಆ ಬಗ್ಗೆ ನೀವು ಕೊರಗಬಾರದು ಮತ್ತು ಪ್ರಯತ್ನಿಸಲೂ ಬಾರದು. ಅವರು ವಿಮುಖರಾಗಿದ್ದರೂ ನಿಮ್ಮ ತಾಯಿ ನೆಮ್ಮದಿಯಿಂದ ಇರಲು ಸಾಧ್ಯವಿದೆ. ಮಗನಾಗಿ ನೀವು ಅವರನ್ನು ಇಷ್ಟಪಡುತ್ತೀರಿ. ಈ ಬಗ್ಗೆ ಅವರು ಹೆಮ್ಮೆ ಪಡಬಹುದಲ್ಲವೇ? ಮತ್ತು ಸಂತೋಷವನ್ನು ಅನುಭವಿಸಬಹುದಲ್ಲವೇ? ಮೊದಲು ನೀವು ಮತ್ತು ನಿಮ್ಮ ತಾಯಿ ಮನೆಯಲ್ಲಿರುವ ಪರಿಸ್ಥಿತಿಯನ್ನು ಯಾವ ಮುಜುಗರವಿಲ್ಲದೇ ಒಪ್ಪಿಕೊಂಡುಬಿಡಿ. ನಿಮ್ಮ ಹೆಂಡತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ನೀವೂ ಮತ್ತು ನಿಮ್ಮ ತಾಯಿಯೂ ಒಪ್ಪಿಕೊಂಡು ಬಿಟ್ಟರೆ ಅರ್ಧ ನಿಮ್ಮ ದುಗುಡ ಕಳೆದುಹೋಗುತ್ತದೆ. ಪ್ರಾಚೀನ ಮಾತೊಂದಿದೆ ” ಯಾವುದನ್ನು ಬದಲಾಯಿಸಲು ಸಾಧ್ಯವೇ ಇಲ್ಲವೋ ಅದನ್ನು ಹಾಗೇ ಒಪ್ಪಿಕೊಂಡುಬಿಡಬೇಕು ” ಎಂದು.

    ನಿಮ್ಮ ತಾಯಿ ಮನೆಯ ಕೆಲಸಗಳನ್ನು ಮಾಡುತ್ತಾರೆಂದು ಕೊರಗಿದ್ದೀರಿ. ನೀವು ಬೆಳಿಗ್ಗೆ ಎದ್ದಾಗಿನಿಂದ ಆಫೀಸಿಗೆ ಹೋಗುವವರೆಗೆ ಮತ್ತು ಆಫೀಸಿನಿಂದ ಬಂದ ಮೇಲೆ ಒಂದಿಷ್ಟು ಕೆಲಸಗಳನ್ನು ಮಾಡಿ. ಗಂಡಸಾದವರು ಮನೆಗೆಲಸವನ್ನು ಮಾಡಲೇ ಬಾರದು ಎನ್ನುವ ಕಾನೂನೇನೂ ಇಲ್ಲವಲ್ಲ? ನಿಮ್ಮ ತಾಯಿಯೊಬ್ಬರೇ ಮಾಡುವುದನ್ನು ನೀವೂ ಹಂಚಿಕೊಂಡರೆ ನಿಮ್ಮ ಹೆಂಡತಿಯೇನೂ ಆಕ್ಷೇಪಣೆ ಮಾಡಲಾರರು. ಮತ್ತು ನಿಮ್ಮ ತಾಯಿಗೂ ಮಗ ತನ್ನ ಜೊತೆ ಕೈಜೋಡಿಸುತ್ತಿದ್ದಾನೆನ್ನುವ ಸಂತೋಷ ಸಿಗಬಹುದು. ವಯಸ್ಸಾದರೂ ಶರೀರ ಆರೋಗ್ಯವಾಗಿದ್ದರೆ, ಕೆಲಸ ಮಾಡುವುದು ಒಳ್ಳೆಯದೇ. ದೇಹಕ್ಕೆ ಒಳ್ಳೆಯ ವ್ಯಾಯಮ ದೊರಕಿದಂತಾಗುತ್ತದೆ.

    ಇನ್ನು ನಿಮ್ಮ ತಾಯಿ ಕಡಿಮೆ ತಿನ್ನುವುದರ ಬಗ್ಗೆ ಬೇಜಾರು ಮಾಡಿಕೊಂಡಿದ್ದೀರಿ. ನಿಮ್ಮ ಮಾತು ನಿಜ. ದೇಹಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ತಿನ್ನಲೇ ಬೇಕಾಗುತ್ತದೆ. ಯಾರದೋ ಮೇಲಿನ ಕೋಪಕ್ಕೆ ತಿನ್ನುವುದನ್ನು ಕಡಿಮೆ ಮಾಡಿದರೆ ನಾಳೆ ಆರೋಗ್ಯ ಕ್ಷೀಣಿಸಿದರೆ ಅವರೇ ರೋಗರುಜಿನಗಳನ್ನು ಅನುಭವಿಸಬೇಕಾಗುತ್ತದೆ. ಸಾವಿನ ಕ್ಷಣ ಹತ್ತಿರಬರುವವರೆಗೆ ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಹೊಣೆ.

    ಈ ವಿಚಾರವನ್ನು ಅವರಿಗೆ ಅರ್ಥವಾಗುವಂತೆ ತಿಳಿಸಿ. ಮತ್ತು ಹಣ್ಣುಗಳನ್ನು ತಿನ್ನಬಹುದಾದ ಹಸಿ ತರಕಾರಿಗಳನ್ನೂ ಸಂಜೆಯ ಹೊತ್ತು ಅವರಿಗೆ ನೀವೇ ಹೆಚ್ಚಿಕೊಡಿ. ಮತ್ತು ಅವರು ತಿನ್ನುವಂತೆ ನೋಡಿಕೊಳ್ಳಿ. ಮನಸ್ಸೊಂದಿದ್ದರೆ ಸಂಬಂಧಗಳನ್ನು ಬೆಳೆಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಹತ್ತುಹಲವು ಮಾರ್ಗಗಳಿವೆ. ಮುರಿದುಹಾಕುವುದಕ್ಕೆ ಒಂದೇ ಮಾರ್ಗ ’ಅದು ಜಗಳಕಾಯುವುದು’. ಅದನ್ನು ನಿಮ್ಮ ಹೆಂಡತಿ ಈಗಾಗಲೇ ಮಾಡಿದ್ದಾರೆ. ನೀವೂ ನಿಮ್ಮ ಹೆಂಡತಿಯ ಮೇಲೆ ಒತ್ತಡ ಹೇರುವ ಅಥವಾ ಅವರೊಂದಿಗೆ ಜಗಳ ಕಾಯುವ ನೆಗಿಟೀವ್ ಮಾರ್ಗವನ್ನು ಅನುಸರಿಸದೇ ’ ಅಮ್ಮ’ ನಿಗೆ ಏನು ಬೇಕೋ ಅದನ್ನು ನೀವೇ ಅನುಸರಿಸುತ್ತಾ ಪಾಸಿಟೀವ್ ಮಾರ್ಗವನ್ನು ಹಿಡಿಯಿರಿ. ಅಮ್ಮನೂ ಖುಷಿಯಾಗುತ್ತಾರೆ. ನಿಮಗೂ ನೆಮ್ಮದಿ ಸಿಗುತ್ತದೆ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗಾಗಿ https://www.vijayavani.net/ ಕ್ಲಿಕ್ಕಿಸಿ ಅದರಲ್ಲಿರುವ ಅಂಕಣ ಕಾಲಂನಲ್ಲಿರುವ ನಂದೊಂದು ಕಥೆ ವಿಭಾಗಕ್ಕೆ ಹೋಗಿ.

    ಗಿಣಿಯಂತೆ ಪತ್ನಿಯನ್ನು ಸಾಕಿದೆ- ಇನ್ನೊಬ್ಬನ ಸಂಗ ಮಾಡಿ ಹದ್ದಾಗಿದ್ದಾಳೆ, ದಾರಿ ತೋಚದಾಗಿದೆ…

    ಗಂಡನಿಗೆ ನನ್ನ ಬಗ್ಗೆ ಆಸಕ್ತಿಯೇ ಇಲ್ಲ… ಏನು ಮಾಡಲಿ?

    ಸ್ನೇಹಿತರು ಲಕ್ಷಲಕ್ಷ ಸಂಪಾದಿಸ್ತಿದ್ರೆ ನಾನು ಸಾವಿರದಲ್ಲೇ ಇದ್ದೇನೆ- ಡಿಪ್ರೆಷನ್​ಗೆ ಹೋಗುತ್ತಿರುವೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts