More

    ಸ್ನೇಹಿತರು ಲಕ್ಷಲಕ್ಷ ಸಂಪಾದಿಸ್ತಿದ್ರೆ ನಾನು ಸಾವಿರದಲ್ಲೇ ಇದ್ದೇನೆ- ಡಿಪ್ರೆಷನ್​ಗೆ ಹೋಗುತ್ತಿರುವೆ, ಏನು ಮಾಡಲಿ?

    ಸ್ನೇಹಿತರು ಲಕ್ಷಲಕ್ಷ ಸಂಪಾದಿಸ್ತಿದ್ರೆ ನಾನು ಸಾವಿರದಲ್ಲೇ ಇದ್ದೇನೆ- ಡಿಪ್ರೆಷನ್​ಗೆ ಹೋಗುತ್ತಿರುವೆ, ಏನು ಮಾಡಲಿ?

    ಪ್ರಶ್ನೆ : ನಾನು 27ವರ್ಷದ ಬಿ.ಇ ಪದವಿಧರ. ಉದ್ಯೋಗವೇನೋ ಇದೆ. ಆದರೆ ಈಗಿರುವ ಕೆಲಸಕ್ಕಿಂತಾ ಇನ್ನೂ ಉತ್ತಮವಾದ ಕೆಲಸ ಸಂಪಾದಿಸಿ ಹೆಚ್ಚು ದುಡಿಯಬೇಕೆಂದು ಆಸೆ. ಸರ್ಕಾರೀ ಕೆಲಸಕ್ಕೂ ಪ್ರಯತ್ನಪಡುವ ಇರಾದೆಯೇನೋ ಇದೆ. ಆದರೆ ಖಂಡಿತಾ ನನಗೆ ಗೊತ್ತು ಸರ್ಕಾರೀ ಕೆಲಸ ನನಗೆ ಸಿಗುವುದಿಲ್ಲ. ಏಕೆಂದರೆ ನನಗೆ ಡಯಾಬಿಟೀಸ್ ಇದೆ. ನಾನು ಕೆಲಸಕ್ಕೆ ಆಯ್ಕೆಯಾದರೂ ಮೆಡಿಕಲ್ ಟೆಸ್ಟ್ ನಲ್ಲಿ ಫ಼ೇಲ್ ಆಗಿಬಿಡುತ್ತೇನೆ ಎನ್ನುವ ಭಯ ಕಾಡುತ್ತದೆ. ಅಲ್ಲದೇ ನನಗೆ ಮದುವೆಯಾಗುವ ಆಸೆ ಇದೆ. ಅದಕ್ಕೂ ಈ ಡಯಾಬಿಟೀಸ್ ಅಡ್ಡಗಾಲು ಹಾಕುತ್ತಿದೆ. ಈ ಎರಡೂ ಚಿಂತೆಯಲ್ಲಿ ಮನಸ್ಸು ಹಣ್ಣಾಗುತ್ತಿದೆ. ಯಾವುದನ್ನು ಮಾಡಲೂ ಹಿಂಜರಿಕೆಯಾಗುತ್ತದೆ. ಈಗಿರುವ ಕೆಲಸದಲ್ಲಿ ಗಳಿಕೆ ಅಷ್ಟೇನೂ ಚೆನ್ನಾಗಿಲ್ಲ. ನನ್ನ ಜೊತೆಯಲ್ಲಿ ಓದಿದವರು ಲಕ್ಷ ಲಕ್ಶ್ಝಸಂಪಾದಿಸುತ್ತಿದ್ದಾರೆ. ನಾನೋ ಇನ್ನೂ ಹಲವು ಸಾವಿರಕ್ಕೆ ಕೈಯೊಡ್ಡಿ ಕುಳಿತಿದ್ದೇನೆ. ನನಗೆ ಬರುತ್ತಿರುವ ಸಂಬಳ ಕಡಿಮೆಯೆನ್ನುವ ದುಃಖದಿಂದ ನನ್ನ ಬಗ್ಗೆ ನನಗೇ ಬೇಸರವಾಗುತ್ತದೆ. ದಿನದಿನಕ್ಕೂ ಡಿಪ್ರೆಶನ್‍ಗೆ ಒಳಗಾಗುತ್ತಿದ್ದೇನೇನೋ ಎನಿಸುತ್ತದೆ. ದಯವಿಟ್ಟು ಇದಕ್ಕೆ ಪರಿಹಾರವಿದ್ದರೆ ತಿಳಿಸಿ.

    ಉತ್ತರ: ಖಂಡಿತಾ ಪರಿಹಾರವಿದೆ. ನೀವು ಮೊದಲು ಡಯಾಬಿಟೀಸ್ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಪಡೆದುಕೊಳ್ಳಿ. ತಮ್ಮ ಆರನೇ ವಯಸ್ಸಿನಲ್ಲೇ ಡಯಾಬಿಟೀಸ್ ಬಂದು ೮೦ನೇ ವಯಸ್ಸಿನ ವರೆಗೆ ಸುಖವಾಗಿ ಬದುಕಿದ ಹಿರಿಯರನ್ನು ನಾನು ನೋಡಿದ್ದೇನೆ. ಅವರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನೂ ನೋಡಿದರು.

    ನಿಜವಾಗಿ ನೋಡಿದರೆ ಡಯಾಬಿಟೀಸ್ ಒಂದು ಖಾಯಿಲೆಯೇ ಅಲ್ಲವೆಂದು ಡಯಾಬಿಟೀಸ್ ತಜ್ಞ ವೈದ್ಯರೇ ಹೇಳುತ್ತಾರೆ. ದೇಹದಲ್ಲಿ ’ ಇನ್‍ಸುಲಿನ್ ’ ಉತ್ಪಾದನೆ ಕಡಿಮೆಯಾದರೆ, ಅಥವಾ ನಿಂತುಹೋದರೆ ಹೊರಗಿನಿಂದ ಅದನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೇಗೆ ದೇಹದಲ್ಲಿ ವಿಟಮಿನ್, ಕ್ಯಾಲ್ಷಿಯಂ ಕಡಿಮೆಯಾದರೆ ಹೊರಗಿನಿಂದ ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳುತ್ತೇವೋ ಹಾಗೆಯೇ ಇನ್ಸುಲಿನ್ ಸಹ. ಆದರೆ ಇದನ್ನು ಬದುಕಿರುವವರೆಗೂ ತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದು ಮಾತ್ರ ಸತ್ಯ. ನಮ್ಮ ಜೀವನ ಶೈಲಿಯಲ್ಲಿ ಮೂರು ಸಂಗತಿಗಳನ್ನು ಅಳವಡಿಸಿಕೊಂಡರೆ ಡಯಾಬಿಟೀಸ್ ಅನ್ನು ಸದಾ ಹತೋಟಿಯಲ್ಲಿಡಬಹುದು ಎನ್ನುತ್ತದೆ ವೈದ್ಯಶಾಸ್ತ್ರ.

    ೧ ದಿನಕ್ಕೆ ಸ್ವಲ್ಪ ಸ್ವಲ್ಪವೇ ಮೂರು ಅಥವಾ ನಾಲ್ಕು ಬಾರಿ ಸಮಯಕ್ಕೆ ಸರಿಯಾಗಿ ಆಹಾರ ಮತ್ತು ವೈದ್ಯರು ಹೇಳಿದ ಮಾತ್ರೆಗಳನ್ನು ಸೇವಿಸುವುದು.
    ೨ ಪ್ರತಿನಿತ್ಯ ತಪ್ಪದೇ ಒಂದು ಗಂಟೆ ಯೋಗ ಅಥವಾ ನಡಿಗೆಯನ್ನು ಮಾಡುವುದು.
    ೩ ಮುಖ್ಯವಾದುದು, ಸದಾ ಸಕಾರಾತ್ಮಕವಾದ ಚಿಂತನೆಗಳನ್ನು ಮಾಡುತ್ತಿರುವುದು. ನಾನೂ ಒಳ್ಳೆಯದನ್ನೇ ಮಾಡುತ್ತೇನೆ ನನಗೂ ಒಳ್ಳೆಯದೇ ಆಗುತ್ತದೆ ಎನ್ನುವ ನಂಬಿಕೆಯೇ ಸಕಾರಾತ್ಮಕವಾದ ಚಿಂತನೆ. ಈ ಮೂರರ ಜೊತೆಗೆ ಆಗಾಗ್ಗೆ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳುವುದೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದೂ ಅನಿವಾರ್ಯ. ಡಯಾಬಿಟೀಸ್ ಇದ್ದವರಿಗೆ ಸರ್ಕಾರೀ ಕೆಲಸ ಸಿಗುವುದಿಲ್ಲವೆಂದು ನೀವು ತಿಳಿದು ಕೊಂಡಿರುವುದು ಸರಿಯಲ್ಲ. ಈ ಬಗ್ಗೆ ನೀವು ನಿಮ್ಮ ವೈದ್ಯರ ಹತ್ತಿರ ಮಾತನಾಡಿ.

    ಅಲ್ಲದೇ ನಿಮ್ಮ ಮದುವೆಯ ಬಗ್ಗೆಯೂ ನಿಮ್ಮ ವೈದ್ಯರೊಂದಿಗೆ ಸಲಹೆ ಪಡೆಯಬೇಕು. ಡಯಾಬಿಟೀಸ್ ಖಾಯಿಲೆಯ ಬಗ್ಗೆ ಆರೋಗ್ಯವಿಜ್ಞಾನ ಬಹಳಷ್ಟು ಸಂಶೋಧನೆಗಳನ್ನು ಮಾಡಿದೆ ಮತ್ತು ಮಾಡುತ್ತಲೇ ಇದೆ. ಗರ್ಭಿಣಿ ಮಹಿಳೆಯರಿಗಿರುವ ಡಯಾಬಿಟೀಸ್ ಅನ್ನು ಹತೋಟಿಗೆ ತಂದು ಸುಸೂತ್ರವಾಗಿ ಹೆರಿಗೆಯಾಗುವಂತೆ ಮಾಡಲಾಗುತ್ತದೆ. ಡಯಾಬಿಟೀಸ್ ಕಾರಣವಾಗಿ ವೃದ್ಧರಿಗೆ ಕಣ್ಣು ಮಂಜಾದರೆ ಲೇಸರ್ ಕಿರಣಗಳನ್ನು ಹರಿಸಿ ಅವರ ಕಣ್ಣು ಕಾಣುವಂತೆ ಮಾಡಲಾಗುತ್ತದೆ. ಇಷ್ಟೆಲ್ಲಾ ವಿಜ್ಞಾನ ಮುಂದುವರೆದಿರುವಾಗ ವಿದ್ಯಾವಂತರಾದ, ಇನ್ನೂ ಯುವಕರಾದ ನೀವು ಇದೊಂದು ಕಾರಣಕ್ಕೆ ಹೀಗೆ ಅಧೀರರಾಗಿ ಹೀಗೆ ಹಿಂಜರಿಕೆಗಳಿಗೆ ಒಳಗಾಗಬಹುದೇ? ಧೈರ್ಯಂ ಸರ್ವತ್ರ ಸಾಧನಂ ಎನ್ನುವ ಮಂತ್ರವನ್ನು ನಂಬಬೇಕು.

    ಇನ್ನು ಹಣದ ಬಗ್ಗೆ ನಿಮಗೊಂದು ಕಿವಿ ಮಾತು. ಸಂಬಳ ಗಳಿಸುವ ವಿಚಾರದಲ್ಲಿ ನಿಮ್ಮನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳಲೇ ಬೇಡಿ. ನಿಮಗೆ ಅವರು ತೆಗೆದುಕೊಳ್ಳುವ ಸಂಬಳ ಮಾತ್ರ ಕಾಣುತ್ತಿದೆ, ಅವರ ಇತರ ಒತ್ತಡಗಳು ನಿಮಗೆ ಕಾಣಿಸುವುದಿಲ್ಲ. ತುಂಬಾ ಹಣ ಸಂಪಾದಿಸುವವರು ಸುಖವಾಗಿರುತ್ತಾರೆ ಎಂದು ಭಾವಿಸುವುದು ನಮ್ಮ ಭ್ರಮೆಯಷ್ಟೆ! ನಿಮಗೆ ಈಗಿರುವ ಕೆಲಸ ನಿಮ್ಮ ಮನಸ್ಸಿಗೆ ಮೆಚ್ಚುಗೆಯಾಗಿದ್ದರೆ, ಹೆಚ್ಚು ಒತ್ತಡ ಭರಿತ ಕೆಲಸವಲ್ಲದಿದ್ದರೆ, ಇದರಲ್ಲೇ ಮುಂದುವರೆಯುವುದು ಸೂಕ್ತವಲ್ಲವೇ? ಸರಳ ಬದುಕನ್ನು ರೂಢಿಸಿಕೊಂಡವರಿಗೆ ನೆಮ್ಮದಿಯೆನ್ನುವುದು ಕರಗತವಾಗುತ್ತದೆ.

    ಹಣದ ಬೆನ್ನಟ್ಟಿದವರಿಗೆ ನೆಮ್ಮದಿ ಮರೀಚಿಕೆಯಾಗುತ್ತದೆ, ಮತ್ತು ಅದನ್ನು ಪಡೆಯಲು ಅದರ ಹಿಂದೆಯೇ ಓಡುತ್ತಲೇ ಇರಬೇಕಾಗುತ್ತದೆ ಎನ್ನುವುದನ್ನು ಮರೆಯಬೇಡಿ. ವೈದ್ಯರ ಸಲಹೆ ಪಡೆದು ಉದ್ಯೋಗಸ್ಥ ಮಹಿಳೆಯನ್ನು ಮದುವೆಯಾಗಿ. ಇಬ್ಬರಿಗೂ ಬರುವ ಹಣದಲ್ಲಿ ನೆಮ್ಮದಿಯನ್ನು ಕಾಣಲು ಪ್ರಯತ್ನಿಸಿ. ಒಂದು ಮಾತು – ನಿಮಗೆ ಡಯಾಬಿಟೀಸ್ ಇರುವುದನ್ನು ಯಾವಕಾರಣಕ್ಕೂ ಹುಡುಗಿಯಿಂದ ಮುಚ್ಚಿಡಬೇಡಿ. ಇದನ್ನು ತಿಳಿದೇ ನಿಮ್ಮನ್ನು ಒಪ್ಪಿಕೊಳ್ಳುವ ಹುಡುಗಿಯನ್ನು ಮಾತ್ರ ಮದುವೆಯಾಗಿ.

    ನಮ್ಮ ನಾಡಿನಲ್ಲಿ ಸಣ್ಣವಯಸ್ಸಿಗೆ ಡಯಾಬಿಟೀಸ್ ಬಂದಿರುವುದು ನಿಮ್ಮೊಬ್ಬರಿಗೇ ಅಲ್ಲ. ಲಕ್ಷ ಲಕ್ಷ ಜನರಿಗೆ ಬಂದಿದೆ. ಅವರೆಲ್ಲರೂ ತಮತಮಗೆ ತೋಚಿದಂತೆ ಸುಖವಾಗಿಯೇ ಬದುಕುತ್ತಿದ್ದಾರೆ. ನೀವೂ ಹಾಗೇ ಡಯಾಬಿಟೀಸ್ ಎನ್ನುವ ಪದವನ್ನೇ ತಲೆಯಿಂದ ದೂರಮಾಡಿ ಸುಖವನ್ನು ಕಂಡುಕೊಳ್ಳಿ. ವೈದ್ಯರ ಸಲಹೆಯನ್ನು ಮಾತ್ರ ತಪ್ಪದೇ ಪಾಲಿಸಿ. ಶುಭವಾಗಲಿ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗಾಗಿ https://www.vijayavani.net/ ಕ್ಲಿಕ್ಕಿಸಿ ಅದರಲ್ಲಿರುವ ಅಂಕಣ ಕಾಲಂನಲ್ಲಿರುವ ನಂದೊಂದು ಕಥೆ ವಿಭಾಗಕ್ಕೆ ಹೋಗಿ.

    ದೈಹಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗುತ್ತಿದ್ದಾನೆ: ಬದುಕಿದ್ದೂ ಸತ್ತಂತಾಗಿದ್ದೇನೆ- ಏನು ಮಾಡಲಿ?

    ಗಂಡನಿಗೆ ನನ್ನ ಬಗ್ಗೆ ಆಸಕ್ತಿಯೇ ಇಲ್ಲ… ಏನು ಮಾಡಲಿ?

    ಗಿಣಿಯಂತೆ ಪತ್ನಿಯನ್ನು ಸಾಕಿದೆ- ಇನ್ನೊಬ್ಬನ ಸಂಗ ಮಾಡಿ ಹದ್ದಾಗಿದ್ದಾಳೆ, ದಾರಿ ತೋಚದಾಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts