ಅಪ್ಪ ಅಮ್ಮನನ್ನು ಕೊಲೆ ಮಾಡುತ್ತೇನೆಂದು ಹೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಯುವಕ

rape
Published on

ಗುರುಗ್ರಾಮ: ಅತ್ಯಾಚಾರಿಗಳ ವಿರುದ್ಧ ಅದೆಷ್ಟೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಅತ್ಯಾಚಾರವೆಸಗುವವರ ಸಂಖ್ಯೆಯಂತೂ ಕಡಿಮೆಯಾಗುತ್ತಿಲ್ಲ. ಅದರಲ್ಲೂ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಂತೂ ದಿನಿನಿತ್ಯ ಹೆಚ್ಚಳವಾಗುತ್ತಲೇ ಇದೆ. ನೆರೆಯ ಯುವಕನೊಬ್ಬ ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ, ಕೊಲೆ ಬೆದರಿಕೆ ನೀಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಗುರುಗ್ರಾಮದ ನ್ಯೂ ಕಾಲೋನಿ ಏರಿಯಾದಲ್ಲಿ ಈ ಪ್ರಕರಣ ವರದಿಯಾಗಿದೆ. 19 ವರ್ಷದ ಯುವಕ ತನ್ನ ಏರಿಯಾದಲ್ಲಿದ್ದ ಪರಿಚಯಸ್ಥರ ಮನೆಗೆ ಆಗಾಗ ಹೋಗಿ ಬರುತ್ತಿದ್ದ. ನವೆಂಬರ್​ 6ರಂದು ಆ ಮನೆಯಲ್ಲಿ 14 ವರ್ಷದ ಮಗಳು ಮಾತ್ರವೇ ಇದ್ದಾಗ ಭೇಟಿ ನೀಡಿದ್ದಾನೆ. ಆ ಸಮಯದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಒಂದು ವೇಳೆ ತಾನು ಅತ್ಯಾಚಾರ ಮಾಡಿದ ವಿಚಾರವನ್ನು ಯಾರಿಗಾದರೂ ಹೇಳಿದರೆ, ಆಕೆಯ ಕುಟುಂಬಸ್ಥರೆಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ನೀಡಿದ್ದಾನೆ. ಬೆದರಿಕೆಗೆ ಹೆದರಿದ ಬಾಲಕಿ ಈ ವಿಚಾರವನ್ನು ಯಾರ ಮುಂದೆಯೂ ಹೇಳಿಕೊಂಡಿಲ್ಲ.

ಅಷ್ಟಕ್ಕೆ ನಿಲ್ಲಿಸದ ಪಾಪಿ ಯುವಕ ಪದೇಪದೆ ಆಕೆಯ ಮನೆಗೆ ಹೋಗಲಾರಂಭಿಸಿದ್ದಾನೆ. ಯಾರೂ ಇಲ್ಲದ ಸಮಯ ನೋಡಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಮತ್ತದೇ ಬೆದರಿಕೆ ನೀಡಿ ಬಂದಿದ್ದಾನೆ. ಈ ರೀತಿಯ ಕೃತ್ಯದಿಂದ ಮಾನಸಿಕ ಮತ್ತು ದೈಹಿಕ ನೋವಿಗೆ ಒಳಗಾದ ಬಾಲಕಿ ಮನೆಯಲ್ಲಿ ಬೇಸರದಿಂದ ಇರಲು ಆರಂಭಿಸಿದ್ದಾಳೆ.

ತಂಗಿಯ ನಡವಳಿಕೆಯಲ್ಲಿ ಬದಲಾವಣೆ ಕಂಡ ಅಕ್ಕ ನವೆಂಬರ್​ 23ರಂದು ಆಕೆಯನ್ನು ಪ್ರಶ್ನಿಸಿದ್ದಾಳೆ. ಆಗ ದುಃಖ ತಾಳಲಾರದ ಬಾಲಕಿ, ನಡೆದ ಎಲ್ಲ ವಿಚಾರವನ್ನು ಅಕ್ಕನೆದುರು ವಿವರಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿದ್ದು, ಯುವಕನ ವಿರುದ್ಧ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ನವೆಂಬರ್​ 24ರಂದು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net