ಮನೆ ಮಂಜೂರು ಮಾಡದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ | Telangana

Telangana
Published on

Telangana: ಸರ್ಕಾರದ ಇಂದಿರಮ್ಮ ವಸತಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾಗದ ಕಾರಣ ಮನನೊಂದು 45 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್​​ನ ಯಾಚಾರಂನ ಚಿಂತಪಟ್ಲ ಗ್ರಾಮದಲ್ಲಿ ಶುಕ್ರವಾರ (ಮೇ.30) ನಡೆದಿದೆ.

ಸ್ವಂತ ಮನೆ ಇಲ್ಲದ ಕಾರಣ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿರುವ ಅಶೋಕ್ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಇಂದಿರಮ್ಮ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅವರ ಹೆಸರು ಮೊದಲ ಪಟ್ಟಿಯಲ್ಲಿ ಬಂದಿತ್ತು ಆದರೆ ಅಧಿಕಾರಿಗಳು ಇತ್ತೀಚೆಗೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅವರ ಹೆಸರು ಬಂದಿರಲಿಲ್ಲ. ಹೀಗಾಗಿ ಇದರಿಂದ ಮನನೊಂದ ಅಶೋಕ್ ಬೆಳಗಿನ ಜಾವ ಮನೆಯವರು ಗಾಢ ನಿದ್ರೆಯಲ್ಲಿದ್ದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳೀಯ ರಾಜಕೀಯ ನಾಯಕರ ವಂಚನೆ ಚಟುವಟಿಕೆಗಳಿಂದಾಗಿ ಈ ಹಿಂದೆ ಮಂಜೂರಾಗಿದ್ದ ಮನೆ ರದ್ದಾದ ಬಗ್ಗೆ ಅಶೋಕ್ ಅಸಮಾಧಾನ ಮತ್ತು ಕೋಪಗೊಂಡಿದ್ದರು ಎಂದು ಅವರ ಕುಟುಂಬ ಆರೋಪಿಸಿದೆ.

ಅಶೋಕ್ ಅವರ ಮೃತದೇಹವನ್ನು ಚಿಂತಪಟ್ಲ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಇಟ್ಟು ಕುಟುಂಬ ಸದಸ್ಯರು, ಸಂಬಂಧಿಕರು, ಗ್ರಾಮಸ್ಥರು ಮತ್ತು ಸ್ಥಳೀಯ ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದ್ದರಿಂದ ಸ್ವಲ್ಪ ಉದ್ವಿಗ್ನತೆ ಉಂಟಾಗಿತ್ತು. ಗ್ರಾಮದ ಬಡ ಕುಟುಂಬಗಳಿಗೆ ನ್ಯಾಯ ಮತ್ತು ಮನೆಗಳನ್ನು ಒದಗಿಸುವಂತೆ ಅವರು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು.

ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net