

ಗುರುಪುರ: ಧಾರಾಕಾರ ಮಳೆಗೆ ಶುಕ್ರವಾರ ಬೆಳಗ್ಗೆ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮತ್ತೆ ಭಾರಿ ಪ್ರಮಾಣದ ಕುಸಿತ ಆರಂಭಗೊಂಡಿದ್ದು, ವಿಸ್ತರಣೆಗೊಳ್ಳುತ್ತಿರುವ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಭೀತಿ ಹುಟ್ಟಿಸುವಂತಿದೆ.
ಕೆತ್ತಿಕಲ್‌ನಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿದು ಭಾರಿ ಅನಾಹುತ ಸಂಭವಿಸಿತ್ತು. ಅಂದಿನ ದುರಂತಕ್ಕೆ ಗುಡ್ಡದ ಮಣ್ಣು ಮಾರಾಟ ಕಾರಣವಾಗಿದ್ದರೆ, ಪ್ರಸಕ್ತ ಭೀತಿ ವಾತಾವರಣಕ್ಕೆ ‘ಗುಡ್ಡ ಬಗೆಯ’ಲಾದ ಅವೈಜ್ಞಾನಿಕ ಕಾಮಗಾರಿ ಕಾರಣವಾಗಿದೆ. ಸತತ ಸುರಿಯುತ್ತಿರುವ ಮಳೆಗೆ ಹೆದ್ದಾರಿ ಬದಿಯಲ್ಲಿ ಗುಡ್ಡ ಕುಸಿಯದಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ಕಾಮಗಾರಿ ಕ್ಷಣಾರ್ಧದಲ್ಲಿ ಕುಸಿದು ಹೆದ್ದಾರಿಗೆ ಬೀಳುವ ಭೀತಿ ಹೆಚ್ಚಾಗಿದೆ. ತಳಭಾಗದಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಮಣ್ಣು ಕುಸಿಯಲಾರಂಭಿಸಿದೆ. ಇದೇ ಗುಡ್ಡ ಮೇಲಿಂದ ಕುಸಿದರೆ ಲೋಡುಗಟ್ಟಲೆ ಮಣ್ಣು ನೇರವಾಗಿ ಹೆದ್ದಾರಿಗೆ ಬೀಳಲಿದೆ. ಅಂತಹ ಅಪಾಯವೇನಾದರೂ ಸಂಭವಿಸಿದಲ್ಲಿ ಹೆದ್ದಾರಿ ಸಂಚಾರ ಬಂದ್ ಆಗಲಿದ್ದು ಸದ್ಯ ರಾಷ್ಟ್ರೀಯ ಹೆದ್ದಾರಿ 169ರ ಈ ಭಾಗದ ವಾಹನ ಸಂಚಾರ ಅಪಾಯದಲ್ಲಿದೆ. ರಾತ್ರಿ ವೇಳೆ ವಾಹನ ಸವಾರರು ಅತಿ ಎಚ್ಚರ ವಹಿಸಬೇಕು.
ಕೆತ್ತಿಕಲ್‌ನಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ದ್ವಿಪಥ ಕಾಮಗಾರಿ ಪೂರ್ಣಗೊಂಡಿದೆ. ಸದ್ಯ ತಿರುವೈಲು ಸರ್ಕಾರಿ ಶಾಲೆಯಿಂದ ಸ್ವಲ್ಪ ಮುಂದಕ್ಕೆ ಗುಡ್ಡ ಕುಸಿಯಲಾರಂಭಿಸಿದೆ. ಇಲ್ಲಿ ಗುಡ್ಡ ಕುಸಿತ ತಡೆಯಲು ಹಾಸಲಾದ ಅತ್ಯಾಧುನಿಕ ತಂತ್ರಜ್ಞಾನದ ಕಬ್ಬಿಣದ ಜಾಲಿ ಬಿಚ್ಚಿಕೊಂಡಿದೆ. ಇನ್ನು ಗುಡ್ಡದ ಮಣ್ಣು ಹೆದ್ದಾರಿಗೆ ಬೀಳುವುದೊಂದೇ ಬಾಕಿ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಡಿಬಿಎಲ್ ಸಿಬ್ಬಂದಿಯು ಜೆಸಿಬಿ ಬಳಸಿಕೊಂಡು ತೋಡು ಮಾಡಿ ಕೆಳಗಡೆ ನೀರು ಹರಿಯುವಂತೆ ಮಾಡುತ್ತಿದ್ದಾರೆ. ಜತೆಗೆ ಸಂಚಾರ ಸುಗಮಕ್ಕೆ ಬ್ಯಾರಿಕೇಡ್ ಬಳಸಲಾಗಿದ್ದು, ಸಿಬ್ಬಂದಿ ನಿಯುಕ್ತಿಗೊಳಿಸಿದ್ದಾರೆ.
ಮನೆಗಳು ಹೆದ್ದಾರಿಗೆ ಬೀಳುವ ಆತಂಕ
ಜೋರಾದ ಮಳೆಗೆ ಗುಡ್ಡದ ಅಡಿಭಾಗದಲ್ಲಿ ನೀರಿನ ಒರತೆ ಹೆಚ್ಚಾಗಿ ಗುಡ್ಡದ ಮಣ್ಣು ಕುಸಿದಲ್ಲಿ ಕೆತ್ತಿಕಲ್ ಕೆಳಭಾಗದ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ. ಕಳೆದ ಬಾರಿ ಕೆತ್ತಿಕಲ್ ಕುಸಿತ ಸಂಭವಿಸಿದ ಪ್ರದೇಶದ ಮೇಲ್ಗಡೆಯ ಮನೆಗಳಿಗೆ ಅಪಾಯ ಎದುರಾಗಿ, ಮನೆಗಳನ್ನು ಖಾಲಿ ಮಾಡಲಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಕಳೆದ ವರ್ಷ ಗುಡ್ಡ ಕುಸಿತ ಸಂಭವಿಸಿದ ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಣ್ಣು ಕುಸಿಯುತ್ತಿದೆ. ಇಲ್ಲಿ ನಡೆಸಲಾದ ಗ್ಯಾಬಿಯನ್ ವಾಲ್ ಕಾಮಗಾರಿ ಮಣ್ಣು ಪಾಲಾಗುವ ಹಂತ ತಲುಪಿದೆ. ಗುಡ್ಡದ ಮೇಲ್ಭಾಗದಲ್ಲಿ ಇನ್ನಷ್ಟು ಮಣ್ಣು ಆಳಕ್ಕೆ ಕುಸಿದರೆ ಮೇಲ್ಭಾಗದ ಬಡಾವಣೆ ರಸ್ತೆಯೊಂದಿಗೆ(ಖಾಲಿ)ಮನೆಗಳು ಹೆದ್ದಾರಿಗೆ ಬೀಳಲಿವೆ.
ರಸ್ತೆ ತುಂಬೆಲ್ಲ ಹೊಂಡ
ಕೆತ್ತಿಕಲ್‌ನಿಂದ ಸ್ವಲ್ಪ ಮುಂದಕ್ಕೆ ಪರಾರಿ ತಿರುವಿನಲ್ಲಿ ಹೆದ್ದಾರಿಯಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಾದಿದೆ. ಈಗಾಗಲೇ ಒಂದಿಬ್ಬರು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಜಲಪಾತಗಳು ಸೃಷ್ಟಿಯಾಗಿದ್ದು, ಅಲ್ಲಲ್ಲಿ ಚರಂಡಿ ಮುರಿದು ಮಳೆ ನೀರೆಲ್ಲ ಹೆದ್ದಾರಿ ಮೇಲೆಯೇ ಹರಿಯುತ್ತಿದೆ. ಅಂದರೆ, ಮಳೆ ಬಂದಾಗ ಇಲ್ಲೆಲ್ಲ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.