

ಕಲಬುರಗಿ: ಸಾಲದ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಶುರುವಾದ ಗಲಾಟೆ ಗಂಡನ ಸಾವಿನಲ್ಲಿ ಅಂತ್ಯವಾಗಿದೆ. ಅತ್ತ ಪತ್ನಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಸಿರನೂರ ಗ್ರಾಮದ ನಿವಾಸಿ ಬಸವರಾಜ್ ಅಚ್ಚಕೇರಿ (32) ಮೃತ ದುರ್ದೈವಿ. ಇವರ ಪತ್ನಿ ಗೀತಾ(29)ರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರೈತ ಬಸವರಾಜ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಫಸಲು ಅತಿಯಾದ ಮಳೆಯಿಂದ ಹಾನಿಯಾಗಿತ್ತು. ಪರಿಣಾಮ ಬಸವರಾಜ್ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಶನಿವಾರ ಸಂಜೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಜಿಗುಪ್ಸೆಗೊಂಡ ಪತ್ನಿ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಕುಟುಂಬಸ್ಥರು ಗೀತಾಳನ್ನ ಆಸ್ಪತ್ರೆಗೆ ಕರೆದೊಯ್ದರು. ಅತ್ತ ಹೆಂಡತಿ ವಿಷ ಸೇವಿಸಿದ್ದಾಳೆ ಎಂದು ಗಂಡನೂ ಮನೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದ. ಪತ್ನಿಯನ್ನ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮನೆಯಲ್ಲಿ ವಿಷ ಸೇವಿಸಿ ಬಸವರಾಜ್ ಮೃತಪಟ್ಟಿದ್ದ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.