

ಹಾವೇರಿ: ಬಿಜೆಪಿ ಶಾಸಕ ನೆಹರು ಓಲೇಕಾರ್ ಮತ್ತು ಅವರ ಕುಟುಂಬಸ್ಥರು ನಾವು ಉಳುಮೆ ಮಾಡುತ್ತಿರುವ ಭೂಮಿಯನ್ನ ಕಿತ್ತುಕೊಳ್ಳಲು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಪಾಂಡಪ್ಪ ಲಮಾಣಿ(70), ಗುರುಚಪ್ಪ ಲಮಾಣಿ(72), ಗಂಗವ್ವ ಕಬ್ಬೂರು(65) ಮತ್ತು ಹನುಮಂತಪ್ಪ ಬಡಿಗೇರ(41) ಆತ್ಮಹತ್ಯೆಗೆ ಯತ್ನಿಸಿದವರು. ಜಮೀನಿನಲ್ಲೇ ಈ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಏನಿದು ಪ್ರಕರಣ: ಶಿಡೇನೂರು ಗ್ರಾಮದಲ್ಲಿ 29 ಕುಟುಂಬಗಳು ಅಕ್ರಮ ಸಕ್ರಮ ಜಮೀನು ಸಾಗುವಳಿ ಮಾಡಿಕೊಂಡಿವೆ. ಈ ಜಮೀನಿನ ಪೈಕಿ ಪ್ರತಿ ಕುಟುಂಬವೂ ತಲಾ ಹದಿನೈದು ಗುಂಟೆ ಜಮೀನನ್ನು ಬಿಟ್ಟುಕೊಡಬೇಕು ಎಂದು ಶಾಸಕ ಓಲೇಕಾರ್ ಮತ್ತು ಇವರ ಮಕ್ಕಳು ಒತ್ತಾಯಿಸಿದ್ದಾರಂತೆ. ಆದರೆ, ಈ ಜಮೀನನ್ನು ಸರ್ಕಾರ ಅಥವಾ ವೈಯಕ್ತಿಕ ಬಳಕೆಗೆ... ಯಾವುದಕ್ಕೆ ಬಿಟ್ಟು ಕೊಡಲು ಹೇಳಿದ್ದಾರೆ ಎಂಬುದು ಗೊತ್ತಾಗಿಲ್ಲ. ಒಟ್ಟಿನಲ್ಲಿ ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದಕ್ಕೆ ಶಾಸಕರ ಕುಟುಂಬ ನಮ್ಮ ಮೇಲೆ ದಬ್ಬಾಳಿಕೆ ನಡೆತ್ತಿದೆ ಎಂದು ಕೆಲ ರೈತರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್, ಹಾವೇರಿ)