ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

death
Published on

ಮಧ್ಯಪ್ರದೇಶ: ಅಕ್ಕನ ಅಂತ್ಯಸಂಸ್ಕಾರದ ವೇಳೆ ಚಿತೆಗೆ ನಮಸ್ಕರಿಸಲು ಹೋದ ಸಹೋದರ ಚಿತೆಗೆ ಹಾರಿ ಪ್ರಾಣಬಿಟ್ಟ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.

ಧಾರ್‌ನ ಉದಯ್ ಸಿಂಗ್ ಅವರ ಮಗ ಕರಣ್ ಡಾಂಗಿ(18) ಮೃತ ದುರ್ದೈವಿ. ಬಹೇರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಜ್ಗವಾನ್ ಗ್ರಾಮದಲ್ಲಿ ಕರಣ್​ರ ಚಿಕ್ಕಪನ ಮಗಳು ಜ್ಯೋತಿ(21) ಜೂ.9ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಎಷ್ಟೇ ಹುಡಕಾಟ ನಡೆಸಿದರೂ ಆಕೆ ಸಿಕ್ಕಿರಲಿಲ್ಲ. ಮರುದಿನ ತೋಟದ ಬಾವಿಯಲ್ಲಿ ಜ್ಯೋತಿ ಶವ ಪತ್ತೆಯಾಗಿತ್ತು. ಮರುದಿನ ಸಮೀಪದ ಸ್ಮಶಾನದಲ್ಲಿ ಜ್ಯೋತಿಗೆ ಅಂತಿಮ ವಿಧಿವಿಧಾನ ನಡೆದಿತ್ತು. ಅಕ್ಕನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದ ಕರಣ್​, ಸ್ಮಶಾನಕ್ಕೆ ಆಗಮಿಸಿದ್ದ. ಕುಟುಂಬಸ್ಥರು ಜ್ಯೋತಿಯ ಚಿತೆಗೆ ಬೆಂಕಿ ಇಟ್ಟು ಮನೆಯತ್ತ ಹೊರಟರು.

ಈ ವೇಳೆ ಉರಿಯುತ್ತಿದ್ದ ಚಿತೆಗೆ ನಮಸ್ಕರಿಸುವುದಾಗಿ ಹೋದ ಕರಣ್​, ಏಕಾಏಕಿ ಚಿತೆಗೆ ಹಾರಿದ್ದಾನೆ. ಇದನ್ನು ನೋಡಿದ್ದ ಗ್ರಾಮಸ್ಥರು ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಿ ಆತನನ್ನು ರಕ್ಷಿಸಲು ಸ್ಥಳಕ್ಕೆ ದೌಡಾಯಿಸಿದ್ದರು. ಅಷ್ಟರಲ್ಲಿ ಕರಣ್​ ಸುಟ್ಟು ಕರಕಲಾಗಿದ್ದ. ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಬಾ ಆತ್ಮೀಯವಾಗಿದ್ದರು: ಕರಣ್ ಮತ್ತು ಜ್ಯೋತಿ ತುಂಬಾ ಆತ್ಮೀಯವಾಗಿದ್ದರು. ನಿತ್ಯ ಫೋನಿನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ರಕ್ಷಾಬಂಧನ ಹಬ್ಬಕ್ಕೆ ದೂರದೂರಿನಿಂದ ಕರಣ್​, ನಮ್ಮ ಮನೆಗೆ ತಪ್ಪದೇ ಬರುತ್ತಿದ್ದ. ಜ್ಯೋತಿ ರಾಖಿ ಕಟ್ಟುತ್ತಿದ್ದಳು. ಬೇಸಿಗೆ ರಜೆಯಲ್ಲಿ ಗ್ರಾಮಕ್ಕೆ ಕರಣ್​ ಬರುತ್ತಿದ್ದ. ಜೂ.9ರಂದು ನನಗೆ ಕರೆ ಮಾಡಿದ್ದ ಜ್ಯೋತಿ ಐಸ್​ ಕ್ರೀಂ ತರಲು ಹೇಳಿದ್ದಳು. ಕೆಲಸಕ್ಕೆ ಹೋಗಿದ್ದ ನಾನು ಸಂಜೆ ಐಸ್​ಕ್ರೀಂ ತಂದಿದ್ದೆ. ಆದರೆ ಸಂಜೆ ಮನೆಗೆ ಬಂದಾಗ ಜ್ಯೋತಿ ಮನೆಯಲ್ಲಿ ಇರಲಿಲ್ಲ. ಜಮೀನಿಗೆ ಹೋದಾಕೆ ನಾಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ ಬಾವಿಯಲ್ಲಿ ಶವವಾಗಿದ್ದಳು. ಈ ವಿಚಾರ ತಿಳಿದು ಸುಮಾರು 430 ಕಿಮೀ ದೂರದಲ್ಲಿದ್ದ ಕರಣ್​, ತಂದೆ ಜತೆ ಬೈಕ್​ನಲ್ಲಿಯೇ ನಮ್ಮೂರಿಗೆ ಬಂದಿದ್ದ. ಜೂ.11ರಂದು ಸ್ಮಶಾನದಲ್ಲಿ ಅಕ್ಕನ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಅಕ್ಕನ ಸಾವಿಂದ ಕಂಗೆಟ್ಟ ಕರಣ್​ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಎಂದು ವಿವರಿಸುತ್ತಾ ಜ್ಯೋತಿಯ ಕಿರಿ ಸಹೋದರ ರಾಮ್​ರತನ್​ ಕಣ್ಣೀರು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net