

ಮುಂಬೈ: ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಎಷ್ಟೋ ಜನರ ತಾಯಿ ತೀರಿಕೊಂಡರೂ ಆ ಸಾವನ್ನು ಒಪ್ಪಲು, ಸ್ವೀಕರಿಸಲು ಅವರು ಸಿದ್ಧರಿರುವುದಿಲ್ಲ. ಅದೇ ರೀತಿ ಮಾನಸಿಕ ಅಸ್ವಸ್ಥ ಮಗಳೊಬ್ಬಳು ತನ್ನ ತಾಯಿ ಸತ್ತು ತಿಂಗಳುಗಳಾದರೂ ಆಕೆಯ ಅಸ್ಥಿ ಪಂಜರದೊಂದಿಗೇ ಬದುಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥೆ ತನ್ನ ಮನೆಯಿಂದ ಕಸವನ್ನು ರಸ್ತೆಗೆ ಎಸೆಯುತ್ತಿದ್ದಾಳೆ. ಪೂರ್ತಿ ದಿನ ಆಕೆಯ ಮನೆಯಿಂದ ವಿಚಿತ್ರ ಸದ್ದು ಕೇಳುತ್ತಿರುತ್ತದೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಅದರ ತನಿಖೆಗೆಂದು ಪೊಲೀಸರು ಆಕೆಯ ಮನೆಗೆ ಬಂದಿದ್ದಾರೆ. ಆಗ ಆಕೆಯ ತಾಯಿಯ ಅಸ್ಥಿ ಪಂಜರ ಪತ್ತೆಯಾಗಿದೆ. ಮ್ಯಾರಿಯಟ್ ಫರ್ನಾಂಡಿಸ್ ಹೆಸರಿನ ಆಕೆ ತನ್ನ ತಾಯಿ ಎವಾನ್ ಫರ್ನಾಂಡಿಸ್ ಅವರ ಮೃತ ದೇಹವನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಇಷ್ಟು ದಿನ ಬದುಕಿರುವುದು ಗೊತ್ತಾಗಿದೆ.
ಮನೆಯಲ್ಲಿದ್ದ ಮಂಚವೊಂದರ ಕೆಳಗೆ ತಾಯಿಯ ಅಸ್ಥಿ ಪಂಜವರನ್ನು ಬೆಡ್ಶೀಟ್ನಲ್ಲಿ ಸುತ್ತಿ ಇಡಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಆಕೆ ತನ್ನ ತಾಯಿ ಆಗಸ್ಟ್ನಲ್ಲೇ ಮೃತಳಾಗಿದ್ದಾಗಿ ಹೇಳಿದ್ದಾಳೆ. ಸದ್ಯ ಆ ಅಸ್ಥಿ ಪಂಜರವನ್ನು ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದು, ಮ್ಯಾರಿಯಟ್ನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಗಸ್ಟ್ನಲ್ಲಿ ಸತ್ತ ತಾಯಿಯ ದೇಹವನ್ನು ಮೂರು ತಿಂಗಳುಗಟ್ಟಲೆ ಮನೆಯಲ್ಲೇ ಇಟ್ಟುಕೊಂಡರೂ ಈ ವಿಚಾರ ಊರವರಿಗೆ ತಿಳಿಯದಿರುವುದು ಕುತೂಹಲಕಾರಿಯಾಗಿದೆ. ಈ ವಿಚಾರದಲ್ಲಿ ಇನ್ನೂ ಕೆಲವು ಸತ್ಯಾಂಶಗಳು ತನಿಖೆಯ ನಂತರ ಹೊರಬರಬೇಕಿದೆ. (ಏಜೆನ್ಸೀಸ್)