

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳೆ ಎಂದೇ ಪ್ರಸಿದ್ಧಿ ಪಡೆದ ನಗರದ ಗವಿ ಮಠದ ಅಜ್ಜನ ಜಾತ್ರಾಮಹೋತ್ಸವ ಇಂದು(ಬುಧವಾರ) ಬೆಳಗ್ಗೆ 4.30ಕ್ಕೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ನೆರವೇರಿತು.
ಪ್ರತಿ ವರ್ಷ 5 ಲಕ್ಷ ಜನ ಸೇರುತ್ತಿದ್ದ ಈ ಜಾತ್ರೆ ಸಂಜೆ ವೇಳೆ ನಡೆಯುತ್ತಿತ್ತು. ಕರೊನಾ 3ನೇ ಅಲೆ ಇರುವ ಕಾರಣ ಜಿಲ್ಲಾಡಳಿತ ಜಾತ್ರೆಗೆ ನಿರ್ಬಂಧ ವಿಧಿಸಿದ್ದರಿಂದ ಯಾರಿಗೂ ನಿಗದಿತ ಸಮಯವನ್ನು ತಿಳಿಸದೇ ಇಂದು ನಸುಕಿನಲ್ಲಿ ಅತ್ಯಂತ ಸರಳವಾಗಿ ರಥೋತ್ಸವ ನಡೆಸಲಾಗಿದೆ.
ಜಿಲ್ಲಾಡಳಿತದ ಸೂಚನೆ ಮೇರೆಗೆ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸಿದರು. ಆದಾಗ್ಯೂ ನಸುಕಿನಲ್ಲೇ ಶ್ರೀಮಠಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು.