ಊಟ ಇಲ್ಲ ಎಂದಿದ್ದಕ್ಕೆ ಸಿಬ್ಬಂದಿಯನ್ನು ಕೂಡಿಹಾಕಿ ಡಾಬಾಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು! ಕೊಪ್ಪಳದಲ್ಲಿ ಅಮಾನವೀಯ ಕೃತ್ಯ

koppala daba fire
Published on

ಕೊಪ್ಪಳ: ತಡರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಆಕ್ರೋಶಗೊಂಡ ದುಷ್ಕರ್ಮಿಗಳು ಡಾಬಾಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲ ಅಡುಗೆ ಸಿಬ್ಬಂದಿ ಇದ್ದ ಕೋಣೆಗೆ ಹೊರಗಿನಿಂದ ಚಿಲಕ ಹಾಕಿ, ನೀರಿನ ಸಂಪರ್ಕವನ್ನೂ ಕಡಿತ ಮಾಡಿ ಪರಾರಿಯಾಗಿದ್ದಾರೆ. ಇಂತಹ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಆನೆಗೊಂದಿ ಬಳಿ ನಡೆದಿದೆ.

ಬುಧವಾರ ರಾತ್ರಿ 12 ಗಂಟೆಗೆ ಡಾಬಗೆ ಬಂದ ಅಪರಿಚಿತರು ಊಟ ಕೇಳಿದ್ದಾರೆ. ಊಟ ಖಾಲಿ ಆಗಿದೆ, ಲಭ್ಯವಿಲ್ಲ ಎಂದು ಡಾಬಾ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಸಿಡಿಮಿಡಿಗೊಂಡ ಅಪರಿಚಿತರು, ಅಡುಗೆ ಸಿಬ್ಬಂದಿಗೆ ಗೊತ್ತಾಗದಂತೆ ಕೋಣೆಯ ಹೊರಗಿನಿಂದ ಚಿಲಕ ಹಾಕಿ ಕೂಡಿ ಹಾಕಿದ್ದಾರೆ. ಬಳಿಕ ನೀರಿನ ಸಂಪರ್ಕ ಕಡಿತಗೊಳಿಸಿ ಬೆಂಕಿ ಹಚ್ಚಿದ್ದಾರೆ. ಗುಡಿಸಲು ಮಾದರಿಯಲ್ಲಿದ್ದ ಮಂಗಳೂರು ಹೆಂಚಿನ ಹೊದಿಕೆಯ ಒಟ್ಟು 11 ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ.

ಅಡುಗೆ ಕೋಣೆಯಲ್ಲಿದ್ದ ಸಿಬ್ಬಂದಿ ತಕ್ಷಣ ಫೋನ್ ಮೂಲಕ ಆನೆಗೊಂದಿ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿಕೊಂಡು ಬಂಧನದಿಂದ ಹೊರ ಬಂದಿದ್ದಾರೆ. ಬೆಂಕಿ ನಂದಿಸುವ ಹೊತ್ತಿಗಾಗಲೇ ಡಾಬಾ ಸಂಪೂರ್ಣ ಭಾಗ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್​ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net