ಈಕೆಗೆ ಲವರ್​ ಬೇಕು-ಮಗು ಬೇಡ, ವಿವಾಹಿತೆ ಜತೆಗಿನ ಲವ್ವಿಡವ್ವಿಗಾಗಿ ಯುವಕ ಹೀಗಾ ಮಾಡೋದು? ಇವರ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

New Project(51)
Published on

ಮೈಸೂರು: ಅಪರಿಚಿತ ಮಹಿಳೆಯೊಬ್ಬಳು ಒಂದೂವರೆ ವರ್ಷ ಹೆಣ್ಣು ಮಗುವನ್ನು ರಾಯಚೂರಿನ ಬಸ್​ ನಿಲ್ದಾಣದಲ್ಲಿ ಮೈಸೂರು ಜಿಲ್ಲೆ ಎಚ್​.ಡಿ.ಕೋಟೆಯ ಯುವಕ ರಘುಗೆ ನೀಡಿ ನಾಪತ್ತೆಯಾಗಿದ್ದ ಕೇಸ್ಟ್​ಗೆ ಟ್ವಿಸ್ಟ್​ ಸಿಕ್ಕಿದೆ.

ವಿವಾಹಿತ ಮಹಿಳೆ ಜತೆಗಿನ ಲವ್ವಿಡವ್ವಿಯಲ್ಲಿ ಬಿದ್ದಿದ್ದ ಆ ಯುವಕ, ಆಕೆಯ ಮಗುವನ್ನ ದೂರ ಮಾಡಿ ಇಬ್ಬರೂ ಹತ್ತಿರವಾಗಲು ಬಯಸಿದ್ದರು. ವಿವಾಹಿತ ಮಹಿಳೆಯನ್ನ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ ಮಾಡಿಕೊಂಡಿದ್ದ ರಘು, ಆಕೆಯನ್ನ ಪ್ರೀತಿಸುತ್ತಿದ್ದ. ಮೊದಲ ಗಂಡನಿಂದ ದೂರವಾಗಿದ್ದ ಮಹಿಳೆ, ಮಗು ಜೊತೆ ರಾಯಚೂರಿನಲ್ಲೇ ವಾಸವಿದ್ದಳು. ಮೈಸೂರಿನ ರಘು ಜತೆಗಿನ ಸ್ನೇಹ ಪ್ರೀತಿಗೆ ತಿರುಗಿ, ಕೆಲ ತಿಂಗಳಿಂದ ಇಬ್ಬರ ನಡುವೆ ಒಡನಾಟ ಬೆಳೆದಿತ್ತು. ಮದ್ವೆ ಆಗಲು ನಿರ್ಧರಿಸಿದ್ದ ಇಬ್ಬರಿಗೂ ಮಗು ಅಡ್ಡಿಯಾಗಿತ್ತು. ಇದೇ ಕಾರಣಕ್ಕೆ ರಘು ಪೊಲೀಸರ ಮುಂದೆ ಕಥೆ ಕಟ್ಟಿದ್ದ.

ರಘು ಹೇಳಿದ್ದ ಸುಳ್ಳಿನ ಸರಮಾಲೆ: ನಾನು ಕೆಲಸದ ನಿಮಿತ್ತ ಮೇ 8ರಂದು ರಾಯಚೂರಿಗೆ ತೆರಳಿದ್ದೆ. ರಾಯಚೂರಿನಿಂದ ಮೈಸೂರಿಗೆ ಹಿಂದಿರುಗಲು ಅಂದು ಮಧ್ಯಾಹ್ನ ಬಸ್​ ನಿಲ್ದಾಣದಲ್ಲಿದ್ದೆ. ಈ ವೇಳೆ ಮಹಿಳೆಯೊಬ್ಬಳು ನನ್ನ ಬಳಿ ಬಂದು ಶೌಚಗೃಹಕ್ಕೆ ಹೋಗಬೇಕು, 5 ನಿಮಿಷ ಮಗುವನ್ನು ಕೂರಿಸಿಕೊಳ್ಳಿ ವಾಪಸ್​ ಬರುವೆ ಎಂದೇಳಿ ಮಗುವನ್ನು ಕೊಟ್ಟು ಹೋದಳು. ಆಕೆ ಎಷ್ಟೊತ್ತಾದರೂ ವಾಪಸ್​ ಬಾರಲಿಲ್ಲ. ಇಡೀ ಬಸ್​ ನಿಲ್ದಾಣದಲ್ಲಿ ಹುಡುಕಾಡಿದ್ದರೂ ಆಕೆ ಪತ್ತೆಯಾಗಿರಲಿಲ್ಲ. ಬಸ್​ ಹೊರಡಲು ಸಿದ್ಧವಾಗಿದ್ದರಿಂದ ಮಗುವನ್ನು ನನ್ನ ಜತೆಯೇ ಮೈಸೂರಿಗೆ ಕರೆತಂದೆ ಎಂದು ಲಷ್ಕರ್​ ಪೊಲೀಸ್​ ಠಾಣೆಗೆ ಹೋಗಿ ಮರದಿನ ಬೆಳಗ್ಗೆ ಮಗುವನ್ನು ಒಪ್ಪಿಸಿದ್ದ. ಪೊಲೀಸರು ಮಗುವನ್ನು ರಕ್ಷಿಸಿ, ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದರು. ನಂತರ ಮಗುವನ್ನು ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದರು. ಈ ಪ್ರಕರಣದ ಜಾಡು ಹಿಡಿದು ಹೊರ ಪೊಲೀಸರು ಮಗುವಿನ ತಾಯಿಯನ್ನು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.

ರಘುಗೆ ಮಗು ಕೊಟ್ಟಿದ್ದು ಅಪರಚಿತೆಯಲ್ಲ, ಈತನ ಪ್ರೇಯಸಿ ಎಂಬುದು ಬಯಲಾಗಿದೆ. ಮಹಿಳೆಯೇ ಸ್ಫೋಟಕ ರಹಸ್ಯ ಬಾಯ್ಬಿಟ್ಟಿದ್ದಾಳೆ. ನಮ್ಮಿಬ್ಬರ ಪ್ರೀತಿಗೆ ಮಗು ಅಡ್ಡಿಯಾಗುತ್ತೆ ಎಂದು ಹೀಗೆಲ್ಲ ಮಾಡಿದೆವು. ಮಗುವನ್ನ ದೂರ ಮಾಡಿಕೊಂಡು ಮದುವೆಯಾಗಲು ಪ್ಲ್ಯಾನ್ ಮಾಡಿದ್ದೆವು. ಇದೀಗ ಎಲ್ಲವೂ ಗೊತ್ತಾಗಿ ಹೋಗಿದೆ ಎಂದಿದ್ದಾಳೆ. ರಘು ಮತ್ತು ಮಹಿಳೆ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಗುವನ್ನ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net