ಲ್ಯಾಪ್​ಟಾಪ್​ ಸರಿ ಮಾಡಲು ಬಂದಾತ ಮಾಡಬಾರದ್ದು ಮಾಡಿಬಿಟ್ಟ, ಆ ಫೋಟೋ ನೋಡಿ ಬೆಚ್ಚಿದ ಮಹಿಳೆ!

cheating fraud
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಮಹಿಳೆಯ ಫೋಟೋವನ್ನು ಅಶ್ಲೀಲವಾಗಿ ಮಾರ್ಫಿಂಗ್​ ಮಾಡಿ ಆಕೆಗೆ ಕಳುಹಿಸಿ ಮಾನಸಿಕವಾಗಿ ಹಿಂಸಿಸಿದ್ದ ಕಾಮುಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ದಾಸರಹಳ್ಳಿಯ ನಿವಾಸಿ ಪ್ರವಿಣ್​ ರಾವ್​ (40) ಬಂಧಿತ. ದಾಸರಹಳ್ಳಿಯ 38 ವರ್ಷದ ಮಹಿಳೆ ದೂರು ನೀಡಿದವರು. ಮಹಿಳೆಯ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಪ್ರವಿಣ್​, ಶೆಡ್​ ಹಾಕಿ ಚೀಟಿ ವ್ಯವಹಾರ ಮಾಡುತ್ತಿದ್ದ. ಜತೆಗೆ ಲ್ಯಾಪ್​ಟಾಪ್​ ರಿಪೇರಿ ಮಾಡುತ್ತಿದ್ದ. ಆರೋಪಿಯ ಪರಿಚಯವಿದ್ದರಿಂದ ಕೆಲ ದಿನಗಳ ಹಿಂದೆ ಹಾಳಾಗಿದ್ದ ಲ್ಯಾಪ್​ಟಾಪ್​ ಸರಿಪಡಿಸಲು ಆತನನ್ನು ಮಹಿಳೆಯು ಮನೆಗೆ ಕರೆಸಿದ್ದರು. ಲ್ಯಾಪ್​ಟಾಪ್​ ಸರಿಪಡಿಸುವ ವೇಳೆ ಅದರಲ್ಲಿದ್ದ ಮಹಿಳೆಯ ಖಾಸಗಿ ಫೋಟೋ ಮತ್ತು ಕುಟುಂಬಸ್ಥರ ಜತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಮಹಿಳೆಗೆ ಗೊತ್ತಾಗದಂತೆ ಆರೋಪಿ ತನ್ನ ಮೊಬೈಲ್​ಗೆ ಕಳುಹಿಸಿಕೊಂಡಿದ್ದ.

ಬಳಿಕ ಮಹಿಳೆಯ ಫೋಟೋಗೆ ಬೇರೆ ಫೋಟೋ ಅಂಟಿಸಿ ಅಶ್ಲೀಲವಾಗಿ ಮಾರ್ಫಿಂಗ್​ ಮಾಡಿ ಆಕೆಯ ಮೊಬೈಲ್​ಗೆ ಕಳುಹಿಸಿದ್ದ. ಇದನ್ನು ನೋಡಿ ಭಯಗೊಂಡ ಮಹಿಳೆಯು ಪತಿಗೆ ತಿಳಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಕೆರಳಿದ ಪ್ರವಿಣ್​, ಮಹಿಳೆಯ ಮನೆಗೆ ಬಂದು ಹಲ್ಲೆ ನಡೆಸಿದ್ದ. ಚೂರಿ ತೋರಿಸಿ ಬೆದರಿಸಿದ್ದ. ಗಾಲಟೆಯ ಶಬ್ಧ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net