

ಕೊಳ್ಳೇಗಾಲ: ಮಗಳಿಗೆ ಕರೆ ಮಾಡಿ ತಾಯಿಯನ್ನು ಚೆನ್ನಾಗಿ ನೋಡಿಕೋ.. ನಾನು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಹೇಳಿ ನಾಪತ್ತೆಯಾಗಿದ್ದ ತಂದೆ ಶವವಾಗಿ ಪತ್ತೆಯಾಗಿದ್ದಾರೆ.
ಬಸವೇಶ್ವರ ನಗರ ನಿವಾಸಿ ಸುಂದರರಾಜು(55) ಮೃತರು. ಇವರು ಸೋಮವಾರ ಬೆಳಗ್ಗೆ 8.30ರ ಸಮಯದಲ್ಲಿ ಪುತ್ರಿ ರಂಜಿನಿಗೆ ಕರೆ ಮಾಡಿ ತಾಯಿ ಲೋಕೇಶ್ವರಿ ಅವರನ್ನು ಚೆನ್ನಾಗಿ ನೋಡಿಕೋ... ನಾನು ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ನದಿಗೆ ಹಾರುತ್ತಿದ್ದೇನೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಗಾಬರಿಗೊಂಡ ಕುಟುಂಬಸ್ಥರು ತಕ್ಷಣ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಂದರರಾಜು ಸ್ಕೂಟರ್ ವೆಸ್ಲಿ ಸೇತುವೆ ಬಳಿ ಪತ್ತೆಯಾಗಿತ್ತು. ಆದರೆ ಸುಂದರರಾಜು ಸುಳಿವು ಸಿಕ್ಕಿರಲಿಲ್ಲ. ಬುಧವಾರ ಶಿವನಸಮುದ್ರದ ವೆಸ್ಲಿ ಸೇತುವೆ ಸಮೀಪದ ದೊಮ್ಮನಗದ್ದೆ ಕಾವೇರಿ ನದಿ ದಡದಲ್ಲಿ ಮೃತದೇಹ ಪತ್ತೆಯಾಗಿದೆ. ಸುಂದರರಾಜು ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.