

ಲಂಡನ್: ಶ್ವಾನವನ್ನು ವಾಕಿಂಗ್ ಕರೆದೊಯ್ಯಲು ಎರಡು ಲಕ್ಷ ರೂ. ಸಂಬಳವೆಂದರೆ ಯಾರು ನಂಬಲಾರರು. ಅದರಲ್ಲೂ ಕರೊನಾ ಸಂಕಷ್ಟ ಕಾಲದಲ್ಲಿ ಕೆಲಸ ಕಳೆದುಕೊಂಡು 10 ರಿಂದ 20 ಸಾವಿರ ರೂ. ಸಂಬಳಕ್ಕಾಗಿ ಅನೇಕರು ಹರಸಾಹಸ ಪಡುತ್ತಿರುವಾಗ ಶ್ವಾನವನ್ನು ವಾಕಿಂಗ್ ಕರೆದೊಯ್ಯುದರೊಂದಿಗೆ ಅದರ ಪಾಲನೆ ಮಾಡಿದರೆ ತಿಂಗಳಿಗೆ 2 ಲಕ್ಷ ರೂ. ಸಂಬಳ ಸಿಗುತ್ತದೆ ಅಂದರೆ ಅಚ್ಚರಿಯಾಗದೇ ಇರದು.
ಹೌದು, ನಾವು ಹೇಳುತ್ತಿರುವುದು ನಿಜ. ಶ್ವಾನ ಪಾಲನೆ ಮಾಡಿದರೆ ತಿಂಗಳಿಗೆ 2 ಲಕ್ಷ ರೂ. ಸಂಬಳವೆಂದು ಕಂಪನಿಯೊಂದು ಘೋಷಣೆ ಮಾಡಿದೆ. ಹಲವು ವರ್ಷಗಳವರೆಗೆ ದುಡಿದರೂ 20 ರಿಂದ 30 ಸಾವಿರಕ್ಕಿಂತ ಸಂಬಳ ಹೆಚ್ಚಾಗದು. ಅಂಥದ್ದರಲ್ಲಿ 2 ಲಕ್ಷ ಅಂದರೆ ಬಿಡ್ತಾರಾ? ಈ ಕೆಲಸವನ್ನು ಗಿಟ್ಟಿಕೊಳ್ಳಲು ಇರುವ ಅರ್ಹತೆ ಏನು? ಎಂದು ತಿಳಿಯಲು ಈ ಸ್ಟೋರಿ ಓದಿ.
ವಿವರಣೆಗೆ ಬರುವುದಾದರೆ, ಲಂಡನ್ನಲ್ಲಿರುವ ಜೋಸೆಫ್ ಹಜೆ ಆ್ಯರೂನ್ ಅವರ ಲಾ ಸಂಸ್ಥೆ ಕೆಲಸವೊಂದನ್ನು ಘೋಷಣೆ ಮಾಡಿದೆ. ಪ್ರಾಣಿ ಪ್ರಿಯರು ಈ ಕೆಲಸಕ್ಕೆ ತಮ್ಮ ಹೆಸರನ್ನು ಕಂಪನಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಕಂಪನಿಯ ಹಿರಿಯ ವಕೀಲರ ಬಳಿ ಒಂದು ಸಾಕು ನಾಯಿ ಇದೆ. ಅದರ ಪಾಲನೆ ಮಾಡುವುದಾದರೆ ತಿಂಗಳಿಗೆ 2 ಲಕ್ಷ ರೂ. ಸಂಬಳ ನೀಡುವುದಾಗಿ ಜೋಸೆಫ್ ಹಜೆ ಆ್ಯರೂನ್ ಘೋಷಿಸಿದ್ದಾರೆ.
ಆಯ್ಕೆಯಾದವರು ಏನು ಮಾಡಬೇಕೆಂದರೆ ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಶ್ವಾನವನ್ನು ವಾಕಿಂಗ್ ಕರೆದೊಯ್ಯಬೇಕು. ಆಸಕ್ತಿ ಇರುವವರು ಕೆಲಸಕ್ಕೆ ಸಂಪರ್ಕಿಸಬಹುದು. ಪುರುಷರು ಅಥವಾ ಮಹಿಳೆಯರು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಆಯ್ಕೆ ಆದವರು ಶ್ವಾನವನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಯಾವುದೇ ಅನಾರೋಗ್ಯ ಸಮಸ್ಯೆ ಬರದಂತೆ ಜೋಪಾನ ಮಾಡಬೇಕು ಎಂದು ಸಂಸ್ಥೆ ಹೇಳಿದೆ.
ಕೇವಲ ಸಂಬಳ ಮಾತ್ರವಲ್ಲದೆ ಕಂಪನಿ ಮತ್ತೊಂದು ಆಫರ್ ಸಹ ನೀಡಿದೆ. ಪಿಂಚಣಿ, ಲೈಫ್ ಇನ್ಶುರೆನ್ಸ್ ಸೇರಿದಂತೆ ಆರೋಗ್ಯ ವಿಮಾ ಸೌಲಭ್ಯಗಳು ಸಹ ದೊರಕಲಿವೆ. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಶ್ವಾನವನ್ನು ಜೋಪಾನ ಮಾಡಬೇಕು. ಶ್ವಾನವನ್ನು ಲಂಡನ್ನ ಎಲ್ಲಾ ಕಡೆ ಸುತ್ತಾಡಿಸಿಕೊಂಡ ಬರಬೇಕು. ಅದು ಕುಳಿತಲ್ಲೇ ಕುಳಿತಿರಬಾರದು. ಅಲ್ಲದೆ, ಕೆಲಸ ಮಾಡುವವರಿಗೆ ಶನಿವಾರ ಮತ್ತು ಭಾನುವಾರ ರಜೆ ಕೂಡ ಇದೆ. ಆದರೆ, ಕೆಲಸದ ಸಮಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಲೇಬಾರದಂತೆ. ಈಗಾಗಲೇ ಜಾಹೀರಾತು ನೀಡಿದ್ದು, ಸಾವಿರಾರು ಅರ್ಜಿಗಳು ಹರಿದುಬರುತ್ತಿವೆಯಂತೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ. (ಏಜೆನ್ಸೀಸ್)