

ಟೋಕಿಯೊ: ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಗುಂಡೇಟು ಬಿದ್ದಿದೆ ಎಂದು ಶುಕ್ರವಾರ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಶ್ಚಿಮ ಭಾಗದ ನಗರ ನಾರಾದ ರೈಲು ನಿಲ್ದಾಣ ಸಮೀಪ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ 67 ವರ್ಷದ ಶಿಂಜೋ ಅಬೆ ಭಾಷಣ ಮಾಡುತ್ತಿದ್ದರು. ಈ ವೇಳೆ ಗುಂಡಿನ ಶಬ್ದ ಕೇಳಿಸಿದ್ದು, ವೇದಿಕೆ ಮೇಲಿದ್ದ ಶಿಂಜೋ ಅಬೆ ಕುಸಿದು ಬಿದ್ದಿದ್ದು, ದೇಹದಿಂದ ರಸ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
1982ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದ ಶಿಂಜೋ ಅಬೆ, ವಿದೇಶಾಂಗ ಇಲಾಖೆಯಲ್ಲೂ ಕೆಲಸ ಮಾಡಿದ್ದಾರೆ. ಪಕ್ಷದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ 9 ಸೇವೆ ಸಲ್ಲಿಸಿದ್ದ ಅಬೆ, 2006ರ ಜುಲೈನಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. 52ನೇ ವಯಸ್ಸಿನಲ್ಲಿ ಪ್ರಧಾನಿ ಹುದ್ದೆಗೇರಿದ ಅಬೆ, ಆ ಮೂಲಕ ಅತಿ ಕಿರಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಪ್ರಧಾನ ಮಂತ್ರಿಯಾಗಿ ಎರಡು ಅವಧಿಯನ್ನೂ ಪೂರ್ಣಗೊಳಿಸಿದ ಅಬೆ, ಅನಾರೋಗ್ಯದ ಕಾರಣಕ್ಕಾಗಿ 2020ರಲ್ಲಿ ಪ್ರದಾನಿ ಸ್ಥಾನದಿಂದ ಕೆಳಗಿಳಿದಿದ್ದರು.