

ಬೆಂಗಳೂರು: ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ "ಜನತಾ ಮಿತ್ರ''ದ ಸಮಾರೋಪ ಸಮಾರಂಭ ನಡೆಯುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಕುಮಾರಸ್ವಾಮಿ ಅವರು ಕಳೆದ 10 ವರ್ಷದಿಂದ ಈ ಪಕ್ಷವನ್ನ ಉಳಿಸಲು ಏನೆಲ್ಲ ಮಾಡಿದ್ದಾರೆ ಎಂದು ಗೊತ್ತಿದೆ. ಜನತಾ ಮಿತ್ರ ಸಮಾವೇಶ ಯಶಸ್ಸು ಮಾಡಬೇಕೆಂದು ಎಲ್ಲರೂ ಸಂಕಲ್ಪ ತೊಟ್ಟಿದ್ದರು. ನನ್ನ ಆರೋಗ್ಯ ಇನ್ನು ಚೇತರಿಸಿಕೊಳ್ಳಬೇಕು. ನಾನು ಇದೊಂದೇ ಕಡೆ ಇರ್ತೀನಿ ಎಂದು ಭಾವಿಸಬೇಡಿ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, 1995ರಲ್ಲಿ ಇದೇ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ದೊಡ್ಡ ಸಮಾವೇಶ ಮಾಡಲಾಗಿತ್ತು. 1996ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆದ್ರು. ಈಗ 2022ರಲ್ಲಿ ಇದೇ ಬಸವನಗುಡಿಯಲ್ಲಿ ಸಮಾವೇಶ ಮಾಡ್ತಿದ್ದೇವೆ. 2023ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗ್ತಾರೆ. ದೇವೇಗೌಡರೇ ನಿಮ್ಮ ಸಮ್ಮುಖದಲ್ಲಿ ಮುಂದಿನ ವರ್ಷ ಕುಮಾರಸ್ವಾಮಿ ವಿಧಾನಸೌಧದ ಮುಂದೆ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಮುಂದಿನ ಜನವರಿ ತಿಂಗಳಿನಲ್ಲಿ ಮತ್ತೊಮ್ಮೆ ಸಮಾವೇಶ ಮಾಡ್ತೀವಿ. ರೈತರಿಗೆ ರಸಗೊಬ್ಬರ ಸಿಗ್ತಿಲ್ಲ, 4 ಚೀಲ ಕೇಳಿದ್ರೆ, 1 ಚೀಲ ಸಿಗ್ತಿದೆ. ಇನ್ನೂಂದು ವಾರದಲ್ಲಿ ಗೊಬ್ಬರ ಸಮಸ್ಯೆ ಪರಿಹರಿಸದಿದ್ದರೆ ಜೆಡಿಎಸ್‌ನ ಪ್ರತಿ ಜಿಲ್ಲೆಯಲ್ಲೂ ಹೋರಾಟ ಮಾಡಲಿದೆ ಎಂದರು.