ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನ: ಹೊಯ್ಸಳ ಸಿಬ್ಬಂದಿ ಇಲ್ಲದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು

hoysala
Published on

ಹಿರಿಯೂರು: ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ 6 ಮಂದಿ ವಾಣಿವಿಲಾಸ ಸಾಗರ ಜಲಾಶಯದ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ 112 ತುರ್ತು ಸ್ಪಂದನಾ ಸಿಬ್ಬಂದಿ ಅವರ ಜೀವ ಉಳಿಸಿದ್ದಾರೆ.

ತಾಲೂಕಿನ ರಂಗೇನಹಳ್ಳಿ ಗ್ರಾಮದ ಸಂಕ್ರಪ್ಪ, ಪತ್ನಿ ರತ್ನಮ್ಮ ದಂಪತಿ ಪ್ರತಿದಿನ ಜಗಳವಾಡುತ್ತಿದ್ದರು. ಕಲಹದಿಂದ ಮನನೊಂದು ಗಂಡನಿಂದ ದೂರವಾಗಿ ಹಿರಿಯೂರಿನ ಸಕ್ಕರೆ ಕಾರ್ಖಾನೆ ವಸತಿಗೃಹದಲ್ಲಿ ರತ್ನಮ್ಮ ತನ್ನ ವಯಸ್ಸಾದ ತಾಯಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಸಂಕ್ರಪ್ಪ, ಸೋಮವಾರ ಪತ್ನಿ ವಾಸವಿದ್ದ ಮನೆಯ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಇದರಿಂದ ಬೇಸತ್ತ ರತ್ನಮ್ಮ, ಹೀಗೆಯೇ ಮಾಡಿದರೆ ಮಾರಿಕಣಿವೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾನೂ ನಿನ್ನ ಜತೆಗೆ ಬಂದು ಸಾಯುತ್ತೇನೆ ಎಂದು ಸಂಕ್ರಪ್ಪ ಅವರ ಜತೆ ಹೋಗಿದ್ದರು.

ತನ್ನ ಮಕ್ಕಳನ್ನು ಸಂಕ್ರಪ್ಪ ನೀರಿಗೆ ತಳ್ಳುವ ಆತಂಕದಿಂದ ರತ್ನಮ್ಮ 112ಕ್ಕೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ. ತುರ್ತು ಸ್ಪಂದನಾ ಕೇಂದ್ರದ ಸಿಬ್ಬಂದಿ ತಕ್ಷಣವೇ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್​ ಅಧಿಕಾರಿ ಗಂಗಾಧರ್​ ಮತ್ತು ಚಾಲಕ ರವಿ ತೆರಳಿ, ಕುಟುಂಬದವರನ್ನು ರಕ್ಷಿಸಿದ್ದಾರೆ.

ಬಳಿಕ ಕುಟುಂಬದವರನ್ನು ಹಿರಿಯೂರಿನ ಗ್ರಾಮಾಂತರ ಠಾಣೆಗೆ ಕರೆತಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಹೊಯ್ಸಳ 7 ವಾಹನದ ಅಧಿಕಾರಿ ಮತ್ತು ಚಾಲಕನ ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಿ ಎಸ್ಪಿ ರಾಧಿಕಾ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net