ಕುಂದಾಪುರದಲ್ಲಿ ತಾರಕಕ್ಕೇರಿದ ಹಿಜಾಬ್​ ವಿವಾದ: ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಮೆರವಣಿಗೆ

kundapura
Published on

ಉಡುಪಿ: ಹಿಜಾಬ್​ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಶನಿವಾರ ಕುಂದಾಪುರದ ಆರ್​.ಎನ್​.ಶೆಟ್ಟಿ ಪದವಿ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಏಕಾಏಕಿ ರಜೆ ಘೋಷಣೆ ಹಿನ್ನೆಲೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಸ್ತ್ರಿ ಸರ್ಕಲ್​ವರಗೂ ಮೆರವಣಿಗೆ ನಡೆಸಿದರು. ಅತ್ತ ಭಂಡಾರ್‌ಕಾರ್ಸ್‌ ಕಾಲೇಜು ವಿದ್ಯಾರ್ಥಿಗಳೂ ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು.

ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಶನಿವಾರ ಹಿಜಾಬ್ ಧರಿಸಿದವರನ್ನು ತರಗತಿಯೊಳಗೆ ಬಿಡಲಾಗಿತ್ತು. ಅತ್ತ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಜೈಶ್ರೀರಾಮ್ ಘೋಷಣೆ ಕೂಗುತ್ತ ಭಂಡಾರ್‌ಕಾರ್ಸ್‌ ಕಾಲೇಜಿಗೆ ಬಂದರು. ಆ ವೇಳೆ ಗೇಟ್ ಹೊರಗೆ ಶಾಲು ತೆಗೆದು ಒಳಗೆ ಬನ್ನಿ ಎಂದು ಪ್ರಾಂಶುಪಾರಲು ಸೂಚಿಸಿದರು. ಹಿಜಾಬ್​ ಹಾಕಿದವರನ್ನ ತರಗತಿಯಲ್ಲಿ ಕೂರಿಸಿದ್ದೀರಿ. ಕೇಸರಿ ಶಾಲು ಹಾಕಿರುವ ನಮ್ಮನ್ನ ಒಳ ಬಿಡ್ತಿಲ್ಲ ಏಕೆ? ನಮಗೊಂದು-ಅವರಿಗೊಂದು ಯಾವ ನ್ಯಾಯ? ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು. ಹಿಜಾಬ್ ಕಳಚುವ ತನಕ ಕೇಸರಿ ತೊಡುತ್ತೇವೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಬೇಡ ಎಂದು ಪಟ್ಟು ಹಿಡಿದರು. ಕೆಲ ಸಮಯ ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿ ತರಗತಿಗೆ ಹಾಜರಾದರು.

ಕುಂದಾಪುರದ ಬಿ.ಪಿ. ಹೆಗ್ಡೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡುವಂತೆ ಕೋರಿದ ಮುಸ್ಲಿಂ ವಿದ್ಯಾರ್ಥಿನಿಯರು ಪೋಷಕರ ಜತೆ ಕಾಲೇಜಿಗೆ ಬಂದಿದ್ದರು. ನಾವು ಹಿಂದಿನಿಂದಲೂ ಹಿಜಾಬ್ ಧರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಧಾರ್ಮಿಕ ಹಕ್ಕು ಪಾಲಿಸಲು ಅವಕಾಶ ಕೊಡಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಆಗ್ರಹಿಸಿದರು.

ಭಂಡಾರ್‌ಕಾರ್ಸ್‌ ಕಾಲೇಜಿನಲ್ಲೂ ಪೋಷಕರ ಸಭೆ ನಡೆಯಿತು. ತಲೆಗೆ ಸ್ಕಾರ್ಫ್ ತೊಡಲು ಅವಕಾಶ ಕೋರಿದ್ದೇವೆ. ಪ್ರಾಂಶುಪಾಲರಿಂದ ಉತ್ತಮ ಫಲಿತಾಂಶ ಬರಬಹುದು. ನಾವು ಕುಂದಾಪುರದಲ್ಲಿ ಎಷ್ಟು ವರ್ಷ ಅನ್ಯೋನ್ಯತೆಯಿಂದ ಇದ್ದೆವು. ರಾಜಕೀಯ ಸಂಘಟನೆ ಈ ವಿಚಾರಕ್ಕೆ ಪ್ರವೇಶ ಆಗಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ನಮಗೆ ಮುಖ್ಯ ಎಂದು ಪೋಷಕರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net