

ರಾಮನಗರ: ಚಿಕ್ಕಮಗಳೂರಿನಲ್ಲಿ ಆಡಿದ ಆಟವನ್ನು ಇಲ್ಲಿ ಆಡಲು ಬಂದ್ರೆ ನಾನು ಬಿಡಲ್ಲ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪಕ್ಷಾತೀತವಾಗಿ ಕೆಲಸ ಮಾಡಲು ಮುಂದಾಗಿ ಎಂದು ಎಚ್ಚರಿಕೆ ನೀಡಿದರು.
ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತ ಪ್ರಸನ್ನ ಎಂಬಾತ ತನ್ನ ಅಂಗಡಿಯಲ್ಲಿ ಮದ್ಯವನ್ನು ಅಕ್ರಮವಾಗಿ ಮಾರುತ್ತಿದ್ದ ಎಂಬ ಆರೋಪದ ಮೇಲೆ ರಾಮನಗರ ಪೊಲೀಸರು ಆತನನ್ನು ಶನಿವಾರ ಬಂಧಿಸಿದ್ದರು. ಖಾಸಗಿ ಕಾರ್ಯಕ್ರಮ ನಿಮಿತ್ತ ರಾಮನಗರಕ್ಕೆ ಭಾನುವಾರ ಬಂದಿದ್ದ ಎಚ್ಡಿಕೆ ಬಳಿ ಜೆಡಿಎಸ್ ಕಾರ್ಯಕರ್ತರು ಈ ವಿಚಾರ ಹೇಳಿದರು. ಸ್ಥಳದಲ್ಲೇ ಎಸ್ಪಿಗೆ ಫೋನ್ ಮಾಡಿದ ಎಚ್ಡಿಕೆ, ನಿಮ್ಮ ಚಿಕ್ಕಮಗಳೂರಿನ ಆಟವನ್ನು ಇಲ್ಲಿ ಆಡೋಕೆ ಬರ್ಬೇಡಿ. 500 ಮದ್ಯದ ಬಾಟಲಿಗಳೊಂದಿಗೆ ಸಿಕ್ಕಿಬಿದ್ದವರನ್ನು ನಿಮ್ಮ ಇಲಾಖೆಯವರೇ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡುತ್ತಾರೆ. ದುಡಿದು ಹೈರಾಣಾಗಿರುವ ರೈತರ ಕುಡಿಯಲೆಂದು ಹೊಲಗಳಲ್ಲಿ 20 ಬಾಟಲಿಗಳನ್ನು ಇಟ್ಟುಕೊಂಡಿದ್ದರೆ ಅವರನ್ನು ಜೈಲಿಗೆ ಕಳಿಸುತ್ತೀರಾ? ಎಂದು ಪ್ರಶ್ನಿಸಿದರು.
ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ. ನೀವು ಪಕ್ಷಾತೀತವಾಗಿ ಕೆಲಸ ಮಾಡಿ. ಕಾಂಗ್ರೆಸ್ ಪರವಾಗಿ ಕೆಲಸ ಮಾಡಬೇಡಿ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಮಾಡ್ತೇನೆ. ಜೆಡಿಎಸ್ ಕಾರ್ಯಕರ್ತನನ್ನು ಅರೆಸ್ಟ್ ಮಾಡ್ತೀರಿ, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಟೇಷನ್ ಬೇಲ್ ನೀಡಿದ್ದೀರಿ. ಒಬ್ಬರಿಗೊಂದು ನ್ಯಾಯವೇ? ಎಂದು ಎಚ್ಡಿಕೆ ಸಿಡಿಮಿಡಿಗೊಂಡರು.
ನೀವು ಎಲ್ಲಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡೋದನ್ನ ನಿಲ್ಲಿಸಿ. ಆಗ ನಿಮ್ಮನ್ನು ನಾನು ಮೆಚ್ಚುತ್ತೇನೆ. ಜನರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದ ಎಚ್ಡಿಕೆ, ಈ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ. ನಾನು ಅಧಿಕಾರಿಗಳಿಗೆ ಗೌರವ ಕೊಡ್ತೇನೆ, ಪಕ್ಷಾತೀತವಾಗಿ ಕೆಲಸ ಮಾಡದಿದ್ದಲ್ಲಿ ಕನಕಪುರದವರ ತರಹ ಡೈಲಾಗ್ ಹೇಳ್ತೇನೆ ಎಂದರು.