

ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೀನಿ ಅಂದಿದ್ದು ಚುನಾವಣೆಯಲ್ಲಿ ನಿಲ್ಲೋಕೆ ಅಲ್ಲ ಎಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ ಮಗುವಿನ ಸಂಬಂಧ ಇದೆ ಎಂದರು.
ರಾಮನಗರದಲ್ಲಿ ಕಾರ್ಯಕರ್ತರೊಂದಿಗೆ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಎಚ್ಡಿಕೆ, ನನ್ನ ಕಾರ್ಯಕರ್ತರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಜೆಡಿಎಸ್ ನಾಯಕರು? ಎಂದರು. ಅದಕ್ಕೆ 'ನಾನೇ ಬರ್ತೀನಿ ನಡೆಯಿರಿ' ಎಂದೆ. ನಾನೇ ಬರ್ತೀನಿ ನಡೆಯಿರಿ ಅಂದ್ರೆ ಚುನಾವಣೆಗೆ ನಿಲ್ಲಲು ಅಲ್ಲ. ಈ ಹಿಂದೆ ಹೇಗೆ ಚುನಾವಣೆ ನಡೆಸಿದೆ, ಹಾಗೆಯೇ ಈ ಭಾರಿಯೂ ಚುನಾವಣೆ ನಡೆಸಲು ಬರ್ತೀನಿ ಅಂದೆ. 10 ದಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿಹಳ್ಳಿಗೆ ಭೇಟಿ ನೀಡಿ ಕಳೆದ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ. ಅದೇರೀತಿ ಈ ಸಲವೂ ನಾನೇ ನಾಯಕತ್ವ ವಹಿಸಿಕೊಂಡು ಕೆಲಸ ಮಾಡುವೆ ಎಂಬರ್ಥದಲ್ಲಿ ಹೇಳಿದೆ. 'ನಾನು ಚುನಾವಣೆಗೆ ಬರ್ತೀನಿ' ಅಂದಿಲ್ಲ, 'ನಾನೇ ಬರ್ತೀನಿ ನಡೆಯಿರಪ್ಪಾ' ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಎಚ್ಡಿಕೆ ರಾಮನಗರ ಬಿಟ್ಟು ಹೋಗ್ತಾರಾ? ಎಂಬ ಗೊಂದಲಕ್ಕೆ ತೆರೆ ಎಳೆದರು.
ರಾಮನಗರದ ಜನರು ಮತ್ತು ಕಾರ್ಯಕರ್ತರ ಜತೆ ನನಗಿರುವ ಬಂಧವನ್ನು ನೂರಾರು ಬಾರಿ ಹೇಳಿದ್ದೇನೆ. ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ-ಮಗುವಿನ ಸಂಬಂಧವಿದೆ. ಮಗುವನ್ನು ಬೆಳೆಸಿದ ತಾಯಿಯೇ ಮಗುವಿನ ರಕ್ಷಣೆ ಮಾಡುತ್ತಾಳೆ. ಯಾವುದೇ ಕಾರಣಕ್ಕೂ ಮಗುವಿಗೆ ತೊಂದರೆಯಾಗಲು ಬಿಡಲ್ಲ ಎಂಬ ಅಚಲ ವಿಶ್ವಾಸ ರಾಮನಗರ ಕ್ಷೇತ್ರದ ಮೇಲೆ ನನಗಿದೆ ಎನ್ನುತ್ತಲೇ ಎಚ್ಡಿಕೆ ಭಾವುಕರಾದರು.
ಯಾವುದೇ ಕಾರಣಕ್ಕೂ ರಾಮನಗರದಲ್ಲಿ ಕಾಂಗ್ರೆಸ್ ಬೇರೂರಲು ಸಾಧ್ಯವಿಲ್ಲ. ಫೆ.24ರಂದು ಅಧಿವೇಶನ ಮುಗಿಯುತ್ತದೆ. ಬಳಿಕ ರಾಮನಗರದ ಪ್ರತಿ ಹಳ್ಳಿಗೂ ಭೇಟಿ ನೀಡುವೆ. ಸ್ಥಳೀಯ ಸಮಸ್ಯೆಗಳು, ಸಣ್ಣಪುಟ್ಟ ಸಮಸ್ಯೆಗಳು ಇರ್ತಾವೆ. ಖುದ್ದಾಗಿ ಜನರ ಬಳಿ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸುವೆ. ನಾವೇನು ತಪ್ಪು ಮಾಡಿದ್ದೇವಾ? ಜನಕ್ಕೆ ಏನು ಸಮಸ್ಯೆ ಇದೆ ಎಂದು ತಿಳಿದು ಪರಿಹರಿಸಲು ಹೋಗುವೆ ಎಂದರು.