

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಮ್ಮಿಕೊಂಡಿರುವ 'ಮೇಕೆದಾಟು ಪಾದಯಾತ್ರೆ' ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ' ಸತ್ಯಕ್ಕೆ ಸಮಾಧಿ ಕಟ್ಟಿ 'ಸುಳ್ಳಿನಯಾತ್ರೆʼಗೆ ಹೊರಟವರ ಜಾತಕವನ್ನು ದಾಖಲೆಗಳೇ ಬೆತ್ತಲು ಮಾಡುತ್ತಿವೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್ಡಿಕೆ, ಹಾಲಿ ಪ್ರತಿಪಕ್ಷ ನಾಯಕರ ನಾಲಿಗೆ ಮೇಲೆ ರಾಜ್ಯ ನೀರಾವರಿ ಬಗ್ಗೆ ಸೃಷ್ಟಿ ಆಗುತ್ತಿರುವ ಸುಳ್ಳಿನ ಸರಮಾಲೆಯು ಜನತೆಗೆ ಯಾಮಾರಿಸಿ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಹುಂಬತನವಲ್ಲದೆ ಮತ್ತೇನೂ ಅಲ್ಲ. ಸತ್ಯಕ್ಕೆ ಸಮಾಧಿ ಕಟ್ಟಿ ಸುಳ್ಳಿನಯಾತ್ರೆಗೆ ಹೊರಟವರ ಜಾತಕವನ್ನು ದಾಖಲೆಗಳೇ ಬೆತ್ತಲು ಮಾಡುತ್ತಿವೆ ಎಂದಿದ್ದಾರೆ.
ಕೇಂದ್ರದ ಅನುಮೋದನೆ ಎಂದರೆ, ಮತ್ತೆ ಮತ್ತೆ ಅರ್ಜಿ ಹಿಡಿದು ಕೇಂದ್ರದ ಮರ್ಜಿ ಕಾಯುವುದು. ಅದಕ್ಕೆ, ಅಂದೇ ಸದನದಲ್ಲಿ ಜೆಡಿಎಸ್ ಆ ಭಾಷಣವನ್ನು ವಿರೋಧಿಸಿತ್ತು. ಕಾವೇರಿ ಐ ತೀರ್ಪಿನ ಭಾಗವಾಗಿ ನಮ್ಮ ಪಾಲಿನ ನೀರು ಬಳಕೆಗೆ ಕ್ರಮ ಕೈಗೊಳ್ಳುವುದು ನಮ್ಮ ಹಕ್ಕು. ಈ ಸರಳ ವಿಷಯವೂ ಆವತ್ತಿನ ಸಿಎಂಗೆ ಅರ್ಥವಾಗಲಿಲ್ಲ. ಚಾಮರಾಜನಗರದ ಶ್ರೀ ಚಾಮರಾಜೇಶ್ವರನ ಸನ್ನಿಧಿಯಲ್ಲಿ ಸಿದ್ದಹಸ್ತರು ಸತ್ಯ ನುಡಿಯಬೇಕಿತ್ತು. ಆದರೆ, ಆ ಶಿವನ ಶಿರದಲ್ಲಿ ನೆಲೆನಿಂತ ಗಂಗೆಯ ಸಾಕ್ಷಿಯಾಗಿ ಸುಳ್ಳು ಹೇಳಿ ಅಪಚಾರ ಎಸಗಿದ್ದಾರೆ. ತಪ್ಪಿಗೆ ಪ್ರಾಯಶ್ಚಿತ್ತ ತಪ್ಪಿದ್ದಲ್ಲ ಎಂದುಎಚ್ಡಿಕೆ ಎಚ್ಚರಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ 'ಮೇಕೆದಾಟು ಮಕ್ಮಲ್ ಟೋಪಿʼ ಹಾಕಲು ಹೊರಟಿದ್ದಾರೆ. ಬೆಂಗಳೂರಿಗೆ 9 ಟಿಎಂಸಿ ಕಾವೇರಿ ನೀರು ನಿರಾಕರಿಸಿದ್ದ ಕಾಂಗ್ರೆಸ್, ಈಗ ಅದೇ ನಗರದಲ್ಲಿ 4 ದಿನ ಪಾದಯಾತ್ರೆ ಮಾಡುತ್ತಿದೆ. ಕೋವಿಡ್ ವೇಳೆ ಜನರಿಗೆ ತೊಂದರೆ ಕೊಡಲು ಈ ಹೊಸ ನಾಟಕ ಏಕೆ? ಮೊದಲು ನಾನು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಿ. ಆಮೇಲೆ ಪಾದಯಾತ್ರೆ ಮಾಡಿ, ನನ್ನದೇನೂ ತಕರಾರಿಲ್ಲ ಎಂದಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರಕಾರವು ಡಿಪಿಆರ್'ಗೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ನನ್ನನ್ನು ಉದ್ದೇಶಿಸಿ ಹೇಳಿದ್ದಾರೆ. ಆದರೆ, ಕೇಂದ್ರ ಜಲ ಆಯೋಗದಲ್ಲಿ ಈ ಡಿಪಿಆರ್ ಏಕೆ ಕೊಳೆಯುತ್ತಿದೆ ಎನ್ನುವುದಕ್ಕೆ ಕಾರಣವನ್ನು ಅವರೇಕೆ ಹೇಳುತ್ತಿಲ್ಲ? ಈ ಅಡೆತಡೆಗಳನ್ನು ನಿವಾರಿಸಲು ಹಲವು ಬಾರಿ ಪ್ರಧಾನಿಗಳನ್ನು, ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಆದರೆ, ದಿಲ್ಲಿಯಲ್ಲಿ ಕೊಳೆಬಿದ್ದಿರುವ ಡಿಪಿಆರ್ ಗೆ ಒಪ್ಪಿಗೆ ಪಡೆಯಲು ಕಾಂಗ್ರೆಸ್ ಏನು ಮಾಡಿದೆ? ಎಲ್ಲಿ ಹೋರಾಟ ಎನ್ನುವುದನ್ನು ಪ್ರತಿಪಕ್ಷ ನಾಯಕರು ಜನರಿಗೆ ಹೇಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.