

ಹಾವೇರಿ: ಊಟ ಕೊಡುವುದಾಗಿ ಬಾಲಕಿಯನ್ನ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪ್ರಾಪ್ತ ಬಾಲಕನಿಗೆ 10 ವರ್ಷಗಳ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಸತ್ರ ಫೋಕ್ಸೋ ವಿಶೇಷ ನ್ಯಾಯಾಲಯದ ಹಾಗೂ ಮಕ್ಕಳ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ತೀರ್ಪು ನೀಡಿದ್ದಾರೆ.
ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ ಜನವರಿ 16ರಂದು ಬಾಲಕಿಗೆ ಊಟದ ಆಮಿಷ ತೋರಿಸಿ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ ಕುರಿತು ದೂರು ದಾಖಲಿಸಲಾಗಿತ್ತು. ಪೊಲೀಸ್ ವೃತ್ತ ನಿರೀಕ್ಷಕರು ಪ್ರಕರಣದ ತನಿಖೆ ನಡೆಸಿ, ಬಾಲಕನ ವಿರುದ್ಧ ಸಾಕ್ಷಾಧಾರಗಳು ದೃಢಪಟ್ಟಿದ್ದರಿಂದ ಬಾಲ ನ್ಯಾಯ ಮಂಡಳಿಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನಂತರ ಈ ಪ್ರಕರಣವು ಮಕ್ಕಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಬಾಲಕನ ಮೇಲಿನ ಆರೋಪಗಳು ರುಜುವಾತಾದ ಕಾರಣ ಆತನಿಗೆ ಪೋಕ್ಸೋ ಕಾಯ್ದೆ ಕಲಂ 6ನೇದ್ದರಡಿ 10 ವರ್ಷಗಳ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ ಹಾಗೂ ಸಂತ್ರಸ್ತೆಗೆ 1 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ.