

ಹಾಸನ: ಬೈಕ್ನಲ್ಲಿ ತೆರಳುತ್ತಿದ್ದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಜನರಲ್ಲಿ ಭೀತಿಯುಂಟಾಗಿದೆ. ಈ ಪ್ರಕರಣ ಸಂಬಂಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಂಟ್ರಿ ಕೊಟ್ಟ ನಂತರ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದ್ದು, ಪ್ರತಿಭಟನೆ ಹಾದಿ ತುಳಿದ ರೇವಣ್ಣರನ್ನ ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ರೇವಣ್ಣರ ಆಕ್ರೋಶಕ್ಕೆ ಗುರಿಯಾದ ಸಿಪಿಐ ರೇಣುಕಾಪ್ರಸಾದ್ನನ್ನು ರಜೆ ಮೇಲೆ ಕಳುಹಿಸಲಾಗಿದೆ.
ನಗರದ ಲಕ್ಷ್ಮೀಪುರಂ ಬಡಾವಣೆಯ ಜವೇನಹಳ್ಳಿ ಮಠದ ಸಮೀಪ ಬುಧವಾರ ಸಂಜೆ ಪ್ರಶಾಂಶ್ ಬೈಕ್ನಲ್ಲಿ ಬರುತ್ತಿದ್ದಾಗ ಅವರನ್ನು ಆಟೋದಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳ ತಂಡ ಅಪಘಾತ ಮಾಡಿ ಕೆಳಗೆ ಬೀಳಿಸಿದೆ. ಬಳಿಕ ಪ್ರಶಾಂತ್ ಮೇಲೆ ಮಾರಕಾಸಗಳಿಂದ ಹಲ್ಲೆ ಮಾಡಿ ಹತ್ಯೆಗೈದಿತ್ತು. ಹಲ್ಲೆಯಿಂದ ಪ್ರಶಾಂಶ್ ಅವರ ಎರಡು ಮುಂಗೈಗಳು ತುಂಡರಿಸಿದ್ದು, ಎದೆಭಾಗಕ್ಕೆ ಹರಿತವಾದ ಆಯುಧಗಳಿಂದ ಚುಚ್ಚಲಾಗಿದೆ. ಹತ್ಯೆ ಬಳಿಕ ಹಂತಕರು ಪರಾರಿಯಾಗಿದ್ದರು. ಪ್ರಶಾಂತ್ ಜೆಡಿಎಸ್ ಸದಸ್ಯನಾಗಿದ್ದ ಕಾರಣ ಈ ಪ್ರಕರಣಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಂಟ್ರಿಯಾಗಿದ್ದು, ಪ್ರಶಾಂತ್ ಹತ್ಯೆಗೆ ಪೊಲೀಸ್ ವೈಫಲ್ಯವೇ ಕಾರಣ. ಪೆನ್ಷನ್ ಮೊಹಲ್ಲಾ ಸಿಪಿಐ ಸಿಪಿಐ ರೇಣುಕಾ ಪ್ರಸಾದ್, ಡಿವೈಎಸ್ಪಿ ಉದಯ್ ಭಾಸ್ಕರ್ ಹಾಗೂ ಹಾಸನ ಗ್ರಾಮೀಣ ಠಾಣೆ ಸಿಪಿಐ ಆರೋಕಿಯಪ್ಪ ನೇರವಾಗಿ ಕೃತ್ಯಕ್ಕೆ ಕಾರಣ. ಇವರೆಲ್ಲರೂ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಸಿಪಿಐ ರೇಣುಕಾ ಪ್ರಸಾದ್ ರೌಡಿಗಳಿಗೆ ಕುಮ್ಮಕ್ಕು ನೀಡಿದ್ದಾರೆ. ಇವರನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಬೇಕು. ಅಲ್ಲಿಯವರೆಗೂ ಜಾಗ ಬಿಟ್ಟು ಕದಲಲ್ಲ ಎಂದು ಹಾಸನ ಹಿಮ್ಸ್ ಬಳಿಯೇ ರೇವಣ್ಣ ಧರಣಿ ನಡೆಸಿದರು.
ಅತ್ತ ಮೃತನ ಸಹೋದರ ನವೀನ್ ಕೂಡ ಪ್ರಶಾಂತ್ ಸಾವಿಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೂ ಮರಣೋತ್ತರ ಪರೀಕ್ಷೆ ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದರು. ಸ್ಥಳದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪ್ರಶಾಂತ್ ಬೆಂಬಲಿಗರು ಜಮಾಯಿಸಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ ಹಾಸನದಲ್ಲಿ ಮದ್ಯ ಮಾರಾಟ ಮಾಡದಂತೆ ಡಿಸಿ ಆದೇಶ ಹೊರಡಿಸಿದ್ದಾರೆ. ಪ್ರತಿಭಟನೆ ಹೆಚ್ಚುತ್ತಿದ್ದಂತೆ ರೇಣುಕಾಪ್ರಸಾದ್ರನ್ನು ರಜೆ ಮೇಲೆ ಕಳುಹಿಸಲಾಗಿದೆ.
ಪೂರ್ಣಚಂದ್ರ ಎಂಬಾತ ನನ್ನ ಗಂಡನನ್ನು ಕೊಲೆ ಮಾಡಿದ್ದಾನೆ. ಆರೋಪಿಗೆ ರೌಡಿಸಂ ಹಿನ್ನೆಲೆ ಇದೆ. ನನ್ನ ಗಂಡನನ್ನು ಬೇರೆ ಪಕ್ಷಕ್ಕೆ ಸೇರುವಂತೆ ಪೊಲೀಸ್ ಮೂಲಕವೇ ಈ ಹಿಂದೆ ಒತ್ತಾಯ ಮಾಡಲಾಗಿತ್ತು. ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಸಿಪಿಐ ರೇಣುಕಾ ಪ್ರಸಾದ್ ಒತ್ತಾಯಿಸಿದ್ದರು ಎಂದು ಮೃತನ ಪತ್ನಿ ಆರೋಪಿಸಿದ್ದಾರೆ. ಪಕ್ಷಾಂತರ ಆಗಲ್ಲ ಅಂದ್ರೆ ಕೊಲ್ಲೋದಾ? ಇದೇನಾ ಪ್ರಜಾಪ್ರಭುತ್ವ? ಎಂದು ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ. ಇದಕ್ಕೆ ಧ್ವನಿ ಗೂಡಿಸಿದ ರೇವಣ್ಣ, ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡ್ತೀವಿ ಎಂದು ಎಚ್ಚರಿಸಿದ್ದಾರೆ. ಪ್ರಶಾಂತ್ರ ಅಂತಿಮ ದರ್ಶನ ಪಡೆದ ಸಾರಾ ಗೋವಿಂದು, ಪ್ರಶಾಂತ್ನ ಬೆಳವಣಿಗೆ ಸಹಿಸದೆ ಉದ್ದೇಶ ಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ. ಉನ್ನತ ಮಟ್ಟದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಮರೋಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ರೇವಣ್ಣರ ಮನವೊಲಿಸುವಲ್ಲಿ ಕೊನೆಗೂ ಸಫಲರಾದ ಎಸ್ಪಿ ಶ್ರೀನಿವಾಸ್ ಗೌಡ, ಮೇಲ್ನೋಟಕ್ಕೆ ದ್ವೇಷದಿಂದ ನಡೆದಿರೋ ಕೊಲೆಯಂತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ. ನಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ರೇವಣ್ಣ ಮಾಡಿರುವ ಆರೋಪಗಳ ಮೇಲೂ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಹಳೆ ವೈಷಮ್ಯ ಕಾರಣ?: ಪ್ರಶಾಂತ್ ಹತ್ಯೆಗೆ ಹಳೆ ವೈಷಮ್ಯ ಕಾರಣವೇ ಎಂಬ ಅನುಮಾನ ಪೊಲೀಸರನ್ನು ಕಾಡತೊಡಗಿದೆ. ಹಾಸನ ಜಿಲ್ಲಾ ಡಾ.ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯರಾಗಿದ್ದ ಪ್ರಶಾಂತ್ ಅವರ ತಂದೆ ಹಾ.ರಾ.ನಾಗರಾಜ್ ನಗರಸಭೆ ಸದಸ್ಯರಾಗಿದ್ದರು. ತುಂಡು ಜಮೀನೊಂದಕ್ಕೆ ಉಂಟಾದ ವಿವಾದದಿಂದ ಎಸ್.ವಿ.ಎಂ. ಶಾಲೆಯ ಅಧ್ಯಕ್ಷರಾಗಿದ್ದ ಗ್ಯಾರಳ್ಳಿ ತಮ್ಮಯ್ಯ ಮತ್ತವರ ತಂಡ ನಾಗರಾಜ್ರನ್ನು ಕೊಲೆ ಮಾಡಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಗುಂಪೊಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದ ಬಳಿ ಗ್ಯಾರಳ್ಳಿ ತಮ್ಮಯ್ಯ ಅವರನ್ನು ಹತ್ಯೆ ಮಾಡಿತ್ತು.
ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಶಾಂತ್ ಸೇರಿದಂತೆ ನಾಗರಾಜ್ ಅವರ ಇತರ ಪುತ್ರರನ್ನು ಬಂಧಿಸಿದ್ದರು. ಆದರೆ, ನ್ಯಾಯಾಲಯ ಎಲ್ಲರೂ ನಿದೋರ್ಷಿಗಳು ಎಂದು ಬಿಡುಗಡೆ ಮಾಡಿತ್ತು. ಬಳಿಕ ಪ್ರಶಾಂತ್ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಪ್ರಶಾಂತ್ ಅವರ ಸಹೋದರ ಸಹ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಪ್ರಶಾಂತ್ ಅವರ ಹತ್ಯೆ ನಡೆದಿರುವುದು ಇದೇ ಕಾರಣಕ್ಕೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ. ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.