ನಾನೇನು ಮಠದ ಸ್ವಾಮೀಜಿನಾ? ಕಾಲಿಗೆ ಬೀಳ್ತಿದ್ದೀಯಲ್ಲ... ಕಾರ್ಯಕರ್ತನಿಗೆ ಡಿಕೆಶಿ ಕ್ಲಾಸ್​

DKshi
Published on

ಹಾಸನ: ಏಯ್ ಯಾವನಾದ್ರು ಘೋಷಣೆ ಹಾಕಿದ್ರೆ ನಾನು ಭಾಷಣ ಮಾಡದೆ ಹೋಗ್ತೀನಿ. ಮನುಷ್ಯರ ಏನು ನೀವು? ಮಂಡ್ಯದವರು ಒರಟು ಅಂತಿದ್ದೆ, ಹಾಸನದವರು ಅದಕ್ಕಿಂತ ಒರಟರು. ಯಾರೂ ಕಿರುಚಬಾರದು, ಕಿರುಚಿದ್ರೆ ಮೈಕ್ ಬಿಸಾಕಿ ಹೋಗ್ತೀನಿ... ಹೂವಿನ ಹಾರ ಇಟ್ಕೊಂಡಿರೋರೆಲ್ಲ ನಡೀರಿ ಆ ಕಡೆ...

ಇದು ಶನಿವಾರ ಹಾಸನದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಕಾರ್ಯಕರ್ತರನ್ನು ಗದರಿದ ಪರಿ. ಡಿಕೆಶಿ ಭಾಷಣ ಮಾಡುವಾಗಲೂ ಕಾರ್ಯಕರ್ತರು ಡಿಕೆ ಶಿವಕುಮಾರ್​ ಅವರ ಹೆಸರನ್ನೇಳುತ್ತಾ ಜೈಕಾರ ಕೂಗುತ್ತಿದ್ದರು. ಡಿಕೆಶಿ ಎಷ್ಟೇ ಮನವಿ ಮಾಡಿದ್ರು ಕಾರ್ಯಕರ್ತರು ಸುಮ್ಮನಾಗಲಿಲ್ಲ. ಕೆಲಕಾಲ ಭಾಷಣ ನಿಲ್ಲಿಸಿ ನಂತರ ಮಾತು ಆರಂಭಿಸಿದರೂ ಪರಿಸ್ಥಿತಿ ಹಾಗೇ ಇತ್ತು. ಗರಂ ಆದ ಡಿಕೆಶಿ, ಯಾರಾದ್ರು ಹೆಸರಿಡಿದು ಜೈಕಾರ ಹಾಕಿದ್ರೆ ವಾಪಸ್ ಹೋಗ್ತೀನಿ. ಸಭೆಯನ್ನ ನೀವೆಲ್ಲ ಹಾಳು ಮಾಡ್ತಿದ್ದೀರಿ ಎಂದರು.

ಅಷ್ಟೇ ಅಲ್ಲ ಕಾರ್ಯಕರ್ತನೊಬ್ಬ ಡಿಕೆಶಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಮುಂದಾದ. ಇದಕ್ಕೂ ಕಿಡಿಕಾರಿದ ಡಿಕೆಶಿ, ನಾನೇನು ಮಠದ ಸ್ವಾಮೀಜಿ ಕೆಟೋದ್ನಾ ಕಾಲಿಗೆ ಬೀಳ್ತಿದ್ದೀಯಲ್ಲ. ನಿಮ್ಮ ಅಭಿಮಾನ ತಪ್ಪಲ್ಲ, ಆದರೆ ವ್ಯಕ್ತಿ ಪೂಜೆಗೆ ನಾನು ಅವಕಾಶ ಕೊಡಲ್ಲ. ಪಕ್ಷ ಪೂಜೆ ಮಾಡಬೇಕು. ನಿಮಗೆ ಶಕ್ತಿ ಇದ್ರೆ ಬಿಜೆಪಿ ಮತ್ತು ಜೆಡಿಎಸ್ ಅನ್ನು ಸೋಲಿಸಿ ಜೈಕಾರ ಹಾಕಿ ಎಂದರು.

ನೀವು ನನಗೆ ಅಧಿಕಾರ ಕೊಡೋದಲ್ಲ, ಕಾಂಗ್ರೆಸ್‌ಗೆ ಅಧಿಕಾರ ಕೊಡಬೇಕು. ಆಗ ನೀವು ನನಗೇ ಅಧಿಕಾರ ಕೊಟ್ಟಹಾಗೆ. ಮೇಕೆದಾಟು ಪಾದಯಾತ್ರೆಗೆ ನೀವೂ ಬರಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಎಂಬುವರು ಬೆಳ್ಳಿ ಗದೆ ಕೊಟ್ಟು ಡಿಕೆಶಿಗೆ ಗೌರವಿಸಲು ಮುಂದಾದರು. ಆದರೆ, ಡಿಕೆಶಿ ಬೆಳ್ಳಿ ಗದೆ ಸ್ವೀಕರಿದೆ ಮತ್ತೊಂದು ಕಾರ್ಯಕ್ರಮಕ್ಕೆ ಹೊರಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net