29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

sp muddahanumegowda
Published on

ಕುಣಿಗಲ್​ (ತುಮಕೂರು): ಕುಣಿಗಲ್​ ನ್ಯಾಯಾಲಯ ಆವರಣದಲ್ಲಿ ಬುಧವಾರ ಅಚ್ಚರಿಯೊಂದು ನಡೆಯಿತು. ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ 29 ವರ್ಷದ ನಂತರ ಕಪ್ಪು ಕೋಟು ಧರಿಸಿ ಕೋರ್ಟ್​ ಕಲಾಪದಲ್ಲಿ ಭಾಗವಹಿಸಿ ಹುತ್ರಿದುರ್ಗ ಹೋಬಳಿಯ ಕಕ್ಷಿದಾರನ ಪರವಾಗಿ ಸಿವಿಲ್​ ಪ್ರಕರಣದಲ್ಲಿ ವಾದ ಮಂಡಿಸಿದರು.

ರಾಜಕೀಯ ಕ್ಷೇತ್ರ ಪ್ರವೇಶಿಸುವ ಮೊದಲು ಕುಣಿಗಲ್​ನಲ್ಲಿ ವಕೀಲರಾಗಿ ಖ್ಯಾತಿಗಳಿಸಿದ್ದ ಎಸ್​ಪಿಎಂ ನಂತರ ರಾಜಕಾರಣದಲ್ಲಿ ಬಿಜಿಯಾಗಿದ್ದರು, ಬುಧವಾರ ಕೋರ್ಟ್​ಗೆ ಹಾಜರಾಗುತ್ತಾರೆ ಎಂಬ ಸುದ್ದಿ ತಿಳಿದ ಕುಣಿಗಲ್​ ವಕೀಲ ಸಮೂಹ, ಹಿರಿಯ ಸಿವಿಲ್​ ಜಡ್ಜ್​ ನ್ಯಾಯಾಲಯದ ಸಭಾಂಗಣದಲ್ಲಿ ಕಿಕ್ಕಿರಿದಿದ್ದರು.

1986ರಲ್ಲಿ ಸಕ್ರಿಯ ರಾಜಕೀಯ ಪ್ರವೇಶಿಸಿದ ಎಸ್​.ಪಿ.ಮುದ್ದಹನುಮೇಗೌಡ, 1992ರಲ್ಲಿ ಶಾಸಕರಾಗುವವರೆಗೂ ವಕೀಲರಾಗಿದ್ದರು. ಕುಣಿಗಲ್​, ಬೆಂಗಳೂರು ನ್ಯಾಯಾಲಯಗಳಲ್ಲಿ ವಕೀಲರಾಗಿ ಖ್ಯಾತಿಗಳಿಸಿದ್ದರು. ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಿದ್ದರು.

ಕುಣಿಗಲ್​ ನ್ಯಾಯಾಲಯದಲ್ಲಿಯೇ ವಕೀಲ ವೃತ್ತಿ ಆರಂಭಿಸಿ, ರಾಜಕೀಯದ ಕಾರಣಕ್ಕೆ ಕಲಾಪದಿಂದ ದೂರವಿದ್ದರೂ ಪಟ್ಟಣದ ಬಸ್​ ನಿಲ್ದಾಣದಲ್ಲಿಯೇ ಇದ್ದ ಅವರ ಕಚೇರಿ ಮುಚ್ಚಿರಲಿಲ್ಲ. ಬಹು ವರ್ಷದ ನಂತರ ಕೋರ್ಟ್​ಗೆ ಹಾಜರಾದರೂ ಅವರ ಮೊನಚು ವಾದದಲ್ಲಿ ವ್ಯತ್ಯಾಸ ಕಾಣಿಸಲಿಲ್ಲ, ನ್ಯಾಯಾಧೀಶರು ಕೂಡ ಸಭಾಂಗಣದಲ್ಲಿಯೇ ಮೆಚ್ಚುಗೆ ಸೂಚಿಸಿದರು.

ವಕೀಲನಾಗಿ ಹೆಮ್ಮೆಯಿದೆ. ನಾನು ವೃತ್ತಿ ಆರಂಭಿಸಿದ ಕೊಠಡಿಯಲ್ಲಿಯೇ 29 ವರ್ಷದ ನಂತರ ಮತ್ತೆ ವಾದ ಮಂಡಿಸಿದ್ದು ಸಹಜವಾಗಿ ಖುಷಿ ನೀಡಿದೆ. ಇಲ್ಲಿ ಕೆಲಸ ಮಾಡಿದ್ದರಿಂದಲೇ ಸಾರ್ವಜನಿಕ ಜೀವನದಲ್ಲಿ ನನಗೆ ಯಶಸ್ಸು ಸಿಕ್ಕಿದ್ದು, ಸಿವಿಲ್​ ಪ್ರಕರಣದಲ್ಲಿ ಕಕ್ಷಿದಾರನ ಪರವಾಗಿ ವಾದ ಮಂಡಿಸಿದೆ.

| ಎಸ್​.ಪಿ.ಮುದ್ದಹನುಮೇಗೌಡ ಮಾಜಿ ಸಂಸದ

ಕುಣಿಗಲ್​ನಿಂದ ಎಸ್​ಪಿಎಂ ಸ್ಪರ್ಧೆ: ಕುಣಿಗಲ್​ ಕ್ಷೇತ್ರದಲ್ಲಿ ಮುದ್ದಹನುಮೇಗೌಡ ಅವರ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಕ್ಷೇತ್ರದಿಂದ ನನಗೆ ಟಿಕೆಟ್​ ಕೊಡಿ ಎಂದು ಕಾಂಗ್ರೆಸ್​ ಹೈಕಮಾಂಡ್​ ಬಳಿ ಎಸ್​ಪಿಎಂ ಈಗಾಗಲೇ ಪ್ರಸ್ತಾವನೆ ಇಟ್ಟಿದ್ದಾರೆ. ಮದುವೆ, ಸಾವು-ನೋವು ಸೇರಿ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕ್ಷೇತ್ರದಲ್ಲಿ ಸಂಚರಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net