ಮಗನನ್ನು ಅಂಗನವಾಡಿಗೆ ಸೇರಿಸಿದ ಕೊಪ್ಪಳದ ಕುಷ್ಟಗಿ ಜಡ್ಜ್! ಕಾರಣ ಕೇಳಿದ್ರೆ ಮೆಚ್ಚಿಕೊಳ್ತೀರಿ...

anaganawadi judge son
Published on

ಕುಷ್ಟಗಿ(ಕೊಪ್ಪಳ): ನ್ಯಾಯಾಧೀಶರೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದ್ದು, ಗ್ರಾಮಸ್ಥರ ಉಬ್ಬೇರುವಂತೆ ಮಾಡಿದ್ದಾರೆ. ಬೇಬಿ ಸಿಟ್ಟಿಂಗ್ಸ್, ಕಿಂಡರ್​ ಗಾರ್ಡನ್​ಗಳ ವ್ಯಾಮೋಹಕ್ಕೆ ಸಿಲುಕಿರುವ ಜನರ ನಡುವೆ ಈ ನ್ಯಾಯಾಧೀಶರು ಮಾತ್ರ ವಿಭಿನ್ನವಾಗಿ ನಿಲ್ಲುತ್ತಾರೆ. ಸರ್ಕಾರಿ ಅಂಗನವಾಡಿಗೆ ತಮ್ಮ ಮಗುವನ್ನ ಸೇರಿ ಎಲ್ಲರಿಗೂ ಮಾದರಿಯಾಗಿದೆ.

ಇಂತಹ ಆಶಾದಾಯಕ ಬೆಳವಣಿಗೆ ಕುಷ್ಟಗಿಯಲ್ಲಿ ನಡೆದಿದೆ. ಕುಷ್ಟಗಿ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ತಳವಾರ ಅವರ ಮಗ ಶ್ರೀನಿವಾಸನನ್ನು ಪಟ್ಟಣದ ಇಂದಿರಾ ಕಾಲನಿಯ ಅಂಗನವಾಡಿ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮಗನನ್ನು ಅಂಗನವಾಡಿ ಕೇಂದ್ರಕ್ಕೆ ಕರೆತಂದ ನ್ಯಾಯಾಧೀಶ ಚಂದ್ರಶೇಖರ ತಳವಾರ ಪತ್ನಿ ಪಾರ್ವತಿ, ನಮ್ಮ ಮಗನೂ ಸಾಮಾನ್ಯರಂತೆ ಬದುಕಬೇಕು. ಸಮಾಜದಲ್ಲಿನ ಶಿಷ್ಟಾಚಾರ ಕಲಿಯಲಿ. ಅಂಗನವಾಡಿಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿವೆ. ಸರಳವಾಗಿ ಬದುಕುವುದನ್ನು ಕಲಿಯಬೇಕು. ಎಲ್ಲ ಮಕ್ಕಳಂತೆ ನಮ್ಮ‌ ಮಗನೂ ಬಾಲ್ಯ ಕಳೆಯಲಿ ಎಂಬುದು ನಮ್ಮ ಆಸೆ. ಹೀಗಾಗಿ ಅಂಗನವಾಡಿಗೆ ದಾಖಲಿಸಿದ್ದೇವೆ ಎಂದರು.

ಮಗನನ್ನು ತಾವೇ ಕರೆತಂದ ನ್ಯಾಯಾಧೀಶರ ಪತ್ನಿ ಪಾರ್ವತಿ, ಇತರ ಮಕ್ಕಳೊಡನೆ ಬಿಟ್ಟು ತೆರಳಿದರು. ಅಂಗನವಾಡಿ ಸಿಬ್ಬಂದಿ ಹೂಗುಚ್ಛ ನೀಡಿ ಮಗುವನ್ನು ಬರ ಮಾಡಿಕೊಂಡರು. ಅಂಗನವಾಡಿ ಮೇಲ್ವಿಚಾರಕಿ ಸರಸ್ವತಿ ಮಂಗಳೂರು, ಶಿವಲಿಂಗಮ್ಮ ಹಿರೇಮಠ ಇದ್ದರು‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net