ಹಾಲಿನ ಕ್ಯಾನ್​ ತೊಳೆಯುವ ಮಹಿಳೆ ಹೆಸರಲ್ಲಿ ಲಕ್ಷಾಂತರ ಹಣ ಲೂಟಿ! ಅರಕಲಗೂಡು ತಾಲೂಕಲ್ಲಿ ಹಾಲು ಉತ್ಪಾದಕರಿಗೆ ವಂಚನೆ

milk can
Published on

ಹಾಸನ: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕ್ಯಾನ್​ ತೊಳೆಯುವ ಕೂಲಿ ಕಾರ್ಮಿಕ ಮಹಿಳೆ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ 10.77 ಲಕ್ಷ ರೂ. ಲಪಟಾಯಿಸಿರುವ ಹಗರಣ ಬೆಳಕಿಗೆ ಬಂದಿದ್ದು, ತನ್ನ ಖಾತೆ ಬಳಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಿಳೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಅರಕಲಗೂಡು ತಾಲೂಕು ಇಬ್ಬಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಲತಾ ದೂರು ನೀಡಿರುವ ಮಹಿಳೆ. 2021ರ ಜ.5ರಿಂದ ಡಿ.31ರವರೆಗೆ ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ನ ಅರಕಲಗೂಡು ಶಾಖೆಯಲ್ಲಿನ ಲತಾ ಅವರ ಉಳಿತಾಯ ಖಾತೆಗೆ 10.77 ಲಕ್ಷ ರೂ. ಜಮಾ ಆಗಿದ್ದು, ಅಷ್ಟೂ ಹಣವನ್ನು ಡೆಬಿಟ್​ ಕಾರ್ಡ್​ ಬಳಸಿ ಎಟಿಎಂಗಳಿಂದ ಡ್ರಾ ಮಾಡಲಾಗಿದೆ. ಆದರೆ, ತನ್ನ ಹೆಸರಿನಲ್ಲಿ ಖಾತೆ ತೆರೆದಿರುವುದಾಗಲಿ, ಹಣ ಜಮಾ ಆಗಿರುವುದಾಗಲಿ ಲತಾ ಅರಿವಿಗೇ ಬಂದಿರಲಿಲ್ಲ ಎನ್ನುವುದು ಗಮನಾರ್ಹ.

ಕಾರ್ಯದರ್ಶಿ ಪತಿ ಕೈವಾಡ?: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂದ ಎಲ್ಲ ಜವಾಬ್ದಾರಿಗಳನ್ನು ಮಹಿಳೆಯರೇ ನಿಭಾಯಿಸಬೇಕು ಎನ್ನುವ ನಿಯಮವಿದೆ. ಅದರಂತೆ ನಿತ್ಯ ಉತ್ಪಾದಕರು ತರುವ ಹಾಲನ್ನು ಅಳೆದು, ಗುಣಮಟ್ಟ ಪರೀಕ್ಷಿಸುವ ಜವಾಬ್ದಾರಿ ಹೊಂದಿರುವ ಕಾರ್ಯದರ್ಶಿ ಹುದ್ದೆಗೆ ರೇಖಾ ಎಂಬುವರನ್ನು ನೇಮಿಸಲಾಗಿದೆ.

ಆದರೆ, ರೇಖಾ ಬದಲು ಅವರ ಪತಿಯೇ ನಿತ್ಯವೂ ಪತ್ನಿಯ ಜವಾಬ್ದಾರಿ ನಿಭಾಯಿಸುತ್ತಿದ್ದು, ಆತನೇ ಹಾಲಿನ ಅಳತೆಯಲ್ಲಿ ಉತ್ಪಾದಕರಿಗೆ ಮೋಸ ಮಾಡಿ, ಉಳಿಕೆ ಹಾಲನ್ನು ಲತಾ ಹೆಸರಿನಲ್ಲಿ ಹಾಲು ಒಕ್ಕೂಟಕ್ಕೆ ಮಾರಾಟ ಮಾಡುತ್ತಿದ್ದ. ಅವರ ಹೆಸರಿನ ಖಾತೆಗೆ ಜಮಾ ಆಗುತ್ತಿದ್ದ ಹಣವನ್ನು ಡೆಬಿಟ್​ ಕಾರ್ಡ್​ ಬಳಸಿ ಡ್ರಾ ಮಾಡಿಕೊಳ್ಳುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net