ಪ್ರಮಾಣವಚನ ಸ್ವೀಕರಿಸದೇ ಹಾನಗಲ್​ನ ನೂತನ ಶಾಸಕ ಹೋಗಿದ್ದೆಲ್ಲಿಗೆ? ಮೈಕ್​ನಲ್ಲಿ ಕೂಗಿದರೂ ಬಾರಲಿಲ್ಲ

srinivasa mane
Published on

ಬೆಂಗಳೂರು: ಇತ್ತೀಚೆಗೆ ನಡೆದ ಎರಡು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು. ಆದರೆ, ಸಿಂದಗಿ ಶಾಸಕ ಭೂಸನೂರ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು.

ಆರಂಭದಲ್ಲಿ ಸಭಾಂಗಣದ ಬಳಿ ಕಾಣಿಕೊಂಡಿದ್ದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಏಕಾಏಕಿ ನಾಪತ್ತೆಯಾದರು. ಪ್ರತಿಜ್ಞೆ ಸ್ವೀಕರಿಸುವಂತೆ ವಿಧಾನಸಭೆ ಕಾರ್ಯದರ್ಶಿ ಮೈಕ್ ಮೂಲಕ ಆಹ್ವಾನಿಸಿದರೂ ಮಾನೆಯವರು ಬರಲಿಲ್ಲ. ಅಲ್ಲೇ ಇದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ‌ ಅವರು ಮೊಬೈಲ್ ಮೂಲಕ‌ ಕರೆ ಮಾಡಿ ಸ್ಪೀಕರ್ ಕರೆಯುತ್ತಿದ್ದಾರೆ ಬನ್ನಿ ಎಂದು ಕರೆಯುವ ಪ್ರಯತ್ನ‌ ಮಾಡಿದರು.

ಈ ನಡುವೆ ಸ್ಪೀಕರ್ ಅವರು ಮಾನೆ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಇದ್ಯಾವ ಹುಡುಗಾಟಿಕೆ? ಇದು ಸರಿಯಲ್ಲ. ಇದು ಅಸಭ್ಯ ವರ್ತನೆ. ಈ ರೀತಿ ನಡವಳಿಕೆ ಸರಿಯಲ್ಲ. ಕಾರ್ಯಕ್ರಮ ನಿಗದಿಯಾದ ಮೇಲೆ ಇಲ್ಲಿ ಇರಬೇಕಿತ್ತು, ಸಭಾಂಗಣಕ್ಕೆ ಬಂದು ನಂತರ ಎಲ್ಲಿ ಹೋದರು? ಎಂದು ಸ್ಪೀಕರ್ ಬೇಸರ ಹೊರಹಾಕಿದರು.

ಐದು ನಿಮಿಷ ಮಾನೆಯವರಿಗೆ ಕಾದು, ಬಳಿಕ ಕಾರ್ಯಕ್ರಮ ಮುಕ್ತಾಯಕ್ಕೆ ಸೂಚನೆ‌ ನೀಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪಕ್ಷದ ಅಧ್ಯಕ್ಷರ ಸೂಚನೆಯಂತೆ ಅವರನ್ನು ಭೇಟಿ ಮಾಡಲು‌ ಮಾನೆಯವರು ಪ್ರತಿಜ್ಞಾ ವಿಧಿಯಿಂದ ದೂರ ಉಳಿದು ತೆರಳಿದ್ದಾಗಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net