

ಅಹಮದಾಬಾದ್: ಯುವತಿಯೊಬ್ಬಳು ಸೆಲ್ಫಿ ವಿಡಿಯೋ ಮಾಡಿ ಸಬರಮತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನ ಅಹಮದಾಬಾದ್ ನಗರದಲ್ಲಿ ನಡೆದಿದೆ.
ಮೃತ ಯುವತಿಯನ್ನು ಆಯೇಷಾ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ನಗುತ್ತಲೇ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಯಾವಾಗ ವಿಡಿಯೋ ಪಾಲಕರಿಗೆ ತಲುಪಿದಾಗ ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನದಿಯ ಸುತ್ತ ರಕ್ಷಣಾ ತಂಡ ಶೋಧ ಕಾರ್ಯ ಕೈಗೊಂಡ ಬಳಿಕ ಮೃತದೇಹ ಪತ್ತೆಯಾಗಿದ್ದು, ಶವಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆಯೇಷಾ ತಂದೆ ಲಿಯಾಖತ್ ಅಲಿ ಬ್ಯಾಂಕ್ ಉದ್ಯೋಗಿ. ಮಗಳ ಬಗ್ಗೆ ಮಾತನಾಡಿರುವ ಅಲಿ, 2018ರಲ್ಲಿ ರಾಜಸ್ಥಾನ ಜಲೋರ್ ನಿವಾಸಿ ಆರೀಫ್ ಖಾನ್ ಜತೆ ಆಯೇಷಾಗೆ ಮದುವೆ ಮಾಡಿದೆವು. ಮದುವೆಯಾದ ಕೆಲವೇ ದಿನಗಳಲ್ಲಿ ಆರೀಫ್ ಕುಟುಂಬ ವರದಕ್ಷಿಣೆಗಾಗಿ ಆಯೇಷಾಗೆ ಕಿರುಕುಳ ನೀಡಲು ಆರಂಭಿಸಿತು. ಹೀಗಿರುವಾಗ 2019ರಲ್ಲಿ ಮಗಳನ್ನು ಮನೆಗೆ ಕರೆತಂದ ಆರೀಫ್, ಹಣ ನೀಡುವವರೆಗೂ ಮರಳಿ ಕರೆದೊಯ್ಯುವುದಿಲ್ಲ ಎಂದನು. ಆರೀಫ್ ಇಟ್ಟಿದ್ದ 1.5 ಲಕ್ಷ ರೂ. ಹಣವನ್ನು ಆಯೇಷಾ ಕುಟುಂಬ ನೀಡಿದ ಬಳಿಕ ಆಕೆಯನ್ನು ತನ್ನ ಜತೆಯಲ್ಲಿ ಆರೀಫ್ ಕರೆದೊಯ್ದನು ಎಂದು ಅಲಿ ಮಾಹಿತಿ ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಆರೀಫ್ ಮತ್ತೆ ಹಣಕ್ಕಾಗಿ ಬೇಡಿಕೆ ಇಡಲು ಶುರು ಮಾಡಿದನು. ಮತ್ತೆ ಆಯೇಷಾಳನ್ನು ತವರಿಗೆ ಕರೆತಂದು ಬಿಟ್ಟನು. ಅಲ್ಲದೆ, ಆಕೆಯೊಂದಿಗೆ ಫೋನ್ನಲ್ಲಿ ಮಾತನಾಡುವುದನ್ನು ಸಹ ನಿಲ್ಲಿಸಿದನು. ಇದರಿಂದ ಆಯೇಷಾ ತೀವ್ರವಾಗಿ ನೊಂದಿದ್ದಳು. ಕೆಲವು ದಿನಗಳ ಹಿಂದೆ ಆರೀಫ್ಗೆ ಕರೆ ಮಾಡಿದ್ದ ಆಯೇಷಾ ತನ್ನನ್ನು ಕರೆದೊಯ್ಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಆದರೆ, ಇದಕ್ಕೆ ಆರೀಫ್ ಕ್ಯಾರೆ ಎನ್ನಲಿಲ್ಲ. ನೀನು ಸಾಯಬೇಕೆಂದುಕೊಂಡಿದ್ದರೆ ಸಾಯಿ ಅದರಿಂದ ನನಗೇನು ಇಲ್ಲವೆಂದಿದ್ದ. ಇದರಿಂದ ಮತ್ತಷ್ಟು ಘಾಸಿಗೊಂಡ ಆಯೇಷಾ ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆಂದು ತಂದೆ ಅಲಿ ಆರೋಪಿಸಿದ್ದಾರೆ.
ಬೇಸರದಲ್ಲಿದ್ದ ಮಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಆಗಾಗ ಆಕೆಯನ್ನು ಹುರಿದುಂಬಿಸುತ್ತಿದ್ದೆ. ಆದರೆ, ನನ್ನ ಪ್ರಯತ್ನ ಕೊನೆಗೂ ವಿಫಲವಾಯಿತು ಎಂದು ನೊಂದುಕೊಂಡ ಅಲಿ, ತನ್ನ ಮಗಳ ಸಾವಿಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದರು. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ