ಮಾನವ ಧರ್ಮದ ಶ್ರೇಷ್ಠ ಪ್ರತಿಪಾದಕ

Rambhapuri Shree
Published on

ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಜಗದ್ಗುರು ಪೀಠದ 119ನೇ ಪೀಠಾಧೀಶರಾಗಿದ್ದ ಲಿಂಗೈಕ್ಯ ಜಗದ್ಗುರು ಶ್ರೀವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ 43ನೇ ಲಿಂಗಾಂಗ ಸಾಮರಸ್ಯದ ಪುಣ್ಯ ಸಂಸ್ಮರಣೆಯ ಸ್ಮರಣೋತ್ಸವವು ರಂಭಾಪುರಿ ಜಗದ್ಗುರು ಪೀಠದಲ್ಲಿ ಹಾಗೂ ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಗದಗ ಜಿಲ್ಲೆ ಮುಕ್ತಿಮಂದಿರದ ಪರಿಸರದಲ್ಲಿ ಅಕ್ಟೋಬರ್ 19ರಂದು (ಶನಿವಾರ) ಏಕಕಾಲಕ್ಕೆ ಶ್ರೀಪೀಠದ ಪರಂಪರೆಯಂತೆ ನಡೆಯಲಿದೆ. ನಾಡಿನ ವಿವಿಧ ಮಠಾಧೀಶರು ಹಾಗೂ ಭಕ್ತಗಣ ಪಾಲ್ಗೊಂಡು ಭಕ್ತಿಯ ಪುಷ್ಪನಮನ ಸಲ್ಲಿಸುವರು.

Veerasomeshwara
ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು
ವೀರಶೈವ ಧರ್ಮದ ಪ್ರಥಮ ಗುರುಪೀಠವಾಗಿರುವ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಜಗದ್ಗುರು ಪೀಠವನ್ನು ಸೃಷ್ಟಿ ಸೌಂದರ್ಯದ ಮಡಿಲಲ್ಲಿ ಭದ್ರಾನದಿ ತಟದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರು ಸಂಸ್ಥಾಪಿಸಿದ ಭವ್ಯ ಇತಿಹಾಸವಿದೆ. ಶ್ರೀಮದ್ ರಂಭಾಪುರಿ ಪೀಠದ ಆಚಾರ್ಯ ಪರಂಪರೆಯಲ್ಲಿ 119ನೇ ಜಗದ್ಗುರುಗಳಾಗಿ ವೀರಸಿಂಹಾಸನ ಮಹಾಪೀಠವನ್ನು 1947ರಲ್ಲಿ ಆರೋಹಣ ಮಾಡಿದ ಪರಮಾಚಾರ್ಯರೇ ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರು.

ಹುಬ್ಬಳ್ಳಿ ತಾಲೂಕಿನಲ್ಲೊಂದು ಚಿಕ್ಕ ಗ್ರಾಮ ಪಾಲಿಕೊಪ್ಪ. ಅಲ್ಲಿರುವ ಹಿರೇಮಠವು ಶ್ರೀಮದ್ರಂಭಾಪುರಿ ಜಗದ್ಗುರು ಪೀಠದ ಶಾಖಾಮಠ. ವೇ.ಮೂ.ಅಡವಯ್ಯ ಹಾಗೂ ಸಿದ್ಧಮ್ಮನವರ ಪವಿತ್ರ ಗರ್ಭದಿಂದ 1903ರ ಏಪ್ರಿಲ್ 8ರಂದು ಸಂಜನಿಸಿದವರೇ ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳು. ಜನ್ಮದಾತರಿಂದ ಅತ್ಯುತ್ತಮ ಸಂಸ್ಕಾರ ಪಡೆದ ಇವರು ಭೌತಿಕ ಶಿಕ್ಷಣದ ಜೊತೆಗೆ ಯೋಗ, ಧ್ಯಾನ, ತಪಸ್ಸು ಇವುಗಳ ಮೂಲಕ ಅಧ್ಯಾತ್ಮ ಸಾಧನೆಗೈದು ಆತ್ಮಬಲವನ್ನು ಪಡೆದುಕೊಂಡರು. ಗಿರಿಬೆಟ್ಟಗಳ ದೈವ ಸಾನ್ನಿಧ್ಯದಲ್ಲಿ ಹಾಗೂ ನದಿಕೊಳ್ಳಗಳ ಪವಿತ್ರ ಪ್ರಶಾಂತ ಪರಿಸರಗಳಲ್ಲಿ ಶಿವಯೋಗ ತಪೋನುಷ್ಠಾನಗಳನ್ನು ಕೈಗೊಂಡು ಸಿದ್ಧಿ ಪುರುಷರಾದವರು. ಇವರ ಸದ್ಗುಣಗಳನ್ನು ಕಂಡ ಬಂಕಾಪುರ ಅರಳೆಲೆ ಹಿರೇಮಠದ ಸಾತ್ವಿಕ ಉಪಾಚಾರ್ಯರಾಗಿದ್ದ ಷ. ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಇವರನ್ನು ಪಾಲಿಕೊಪ್ಪ ಹಿರೇಮಠದ ಪಟ್ಟಾಧಿಕಾರಿಗಳನ್ನಾಗಿ ಮಾಡಿ ಶುಭ ಹಾರೈಸಿದರು. ಮುಂದಡಿ ಇಟ್ಟ ಷ. ಬ್ರ. ಗುರು ಗಂಗಾಧರ ಶಿವಾಚಾರ್ಯರು ಅಧ್ಯಾತ್ಮ ಲೋಕದ ಅದ್ಭುತ ಶಕ್ತಿಯಾಗಿ ಕಾರ್ಯ ನಿರ್ವಹಿಸಿದರು.

ಶಿವಮೊಗ್ಗ ಜಿಲ್ಲೆ ಆನವಟ್ಟಿ ವಾಸ್ತವ್ಯದಲ್ಲಿದ್ದ ರಾಜಾಧಿರಾಜ ಪೂಜಿತರಾದ ಶ್ರೀಮದ್ರಂಭಾಪುರಿ ಶಿವಾನಂದ ಜಗದ್ಗುರುಗಳ ಪ್ರಥಮ ದರ್ಶನ ಇವರಿಗಾಯಿತು. ಇದಕ್ಕೆ ಬಂಕಾಪುರದ ಶ್ರೀ ಷ. ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳೇ ಕಾರಣರು. ಇಡೀ ರಾತ್ರಿ ತಂಗಿದ ಕುಟೀರದ ಸುತ್ತ ಗಸ್ತು ತಿರುಗಿ ಮಹಾಗುರುವಿನ ಸಂರಕ್ಷಣಾ ಕಾರ್ಯದ ವೈಖರಿಯನ್ನು ಕಂಡು ಶಿವಾನಂದ ಜಗದ್ಗುರುಗಳು ಮನ ತುಂಬಿ ಆಶೀರ್ವದಿಸಿದರು. ಪಾಲಿಕೊಪ್ಪ ಹಿರೇಮಠದ ಗಂಗಾಧರ ಶಿವಾಚಾರ್ಯರ ಜೀವನ ಪರಿವರ್ತನೆಗೊಂಡಿತು. ಇವರ ನಿಷ್ಠೆ, ಸ್ವಾಭಿಮಾನ, ಕರ್ತವ್ಯನಿಷ್ಠೆ ಕಂಡ ಶಿವಾನಂದ ಜಗದ್ಗುರುಗಳು ಬೆಂಗಳೂರು ಮಹಾನಗರದಲ್ಲಿರುವ ಶ್ರೀರಂಭಾಪುರಿ ಜಗದ್ಗುರು ಪೀಠದ ಖಾಸಾ ಶಾಖಾಮಠಗಳಾಗಿರುವ ಶ್ರೀಮಹಂತಿನ ಮಠದ ಮತ್ತು ಶ್ರೀವಿಭೂತಿಪುರ ಮಠದ ಒಡೆಯರಾಗಿ ಕಾರ್ಯ ನಿರ್ವಹಿಸಲು ಅಧಿಕಾರವನ್ನು ಅನುಗ್ರಹಿಸಿದರು. ಈ ಅವಧಿಯಲ್ಲಿ ಅವರು ಸಮಸ್ತ ಭಕ್ತಾದಿಗಳಿಗೆ ಕೊಟ್ಟ ಧರ್ಮದ ಸಂಸ್ಕಾರ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಬೇವಿನ ರಸ ಮತ್ತು ಹೆಸರು ಕಾಳು ಮಾತ್ರವೇ ಸೇವಿಸಿ, ತಪಸ್ಸು ಮಾಡಿ ಅದ್ಭುತ ಶಕ್ತಿಯನ್ನು ಸಂಪಾದಿಸಿಕೊಂಡರು.

ಶ್ರೀಮದ್ರಂಭಾಪುರಿ ಶಿವಾನಂದ ಜಗದ್ಗುರುಗಳು ತಮ್ಮ ಆರೋಗ್ಯದಲ್ಲಿ ತೊಂದರೆ ಕಂಡುಬಂದ ಸಂದರ್ಭದಲ್ಲಿ ತಾವು ಇಹಲೋಕ ಯಾತ್ರೆಗೆ ವಿದಾಯ ಹೇಳುವುದು ಅವರ ತಪೋಮನಕ್ಕೆ ಗೋಚರವಾಗುತ್ತಿದ್ದಂತೆ ಹುಬ್ಬಳ್ಳಿ ತಾಲೂಕು ಪಾಲಿಕೊಪ್ಪ ಹಿರೇಮಠದ ಷಟಸ್ಥಲ ಬ್ರಹ್ಮ ಶ್ರೀಗುರು ಗಂಗಾಧರ ಶಿವಾಚಾರ್ಯ ಸ್ವಾಮಿಗಳ ಹೆಸರಿನಲ್ಲಿ ಮೃತ್ಯುಪತ್ರ ಬರೆದಿಟ್ಟು 1946ರ ಆಗಸ್ಟ್ 1ರಂದು ಶಿವೈಕ್ಯರಾದರು. ಅವರ ಅಣತಿಯಂತೆ 1947ರಲ್ಲಿ ಶ್ರೀಮದ್ರಂಭಾಪುರಿ ಜಗದ್ಗುರು ಪೀಠದ 119ನೇ ಪೀಠಾಚಾರ್ಯರಾಗಿ ‘ಶ್ರೀ ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು’ ಎಂಬ ಅಭಿದಾನದಿಂದ ಸಮಾನ ಪೀಠಾಚಾರ್ಯರಾದ ಶ್ರೀಮದ್ ಉಜ್ಜಯಿನಿ, ಶ್ರೀಮದ್ ಹಿಮವತ್ಕೇದಾರ, ಶ್ರೀಮದ್ ಶ್ರೀಶೈಲ ಹಾಗೂ ಶ್ರೀಮದ್ ಕಾಶಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ವೀರಸಿಂಹಾಸನವನ್ನು ಆರೋಹಣ ಮಾಡಿದರು.

ವೀರಶೈವ ಧರ್ಮ ಪ್ರತಿಪಾದಿಸುವ ಮಾನವಧರ್ಮದ ಆದರ್ಶಗಳನ್ನು ಕಂಡ ಜಗದ್ಗುರುಗಳು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂದು ತಮ್ಮ ತಪೋವಾಣಿಯ ಉದ್ಘೋಷಣೆಗೈದು ಸರ್ವ ಸಮಾಜಗಳ ಭಾವೈಕ್ಯತೆಗೆ ಮತ್ತು ಧರ್ಮ ಸಾಮರಸ್ಯಕ್ಕೆ ದಿಕ್ಸೂಚಿಯಾದರು. ಅವರು ತಮ್ಮ ಜೀವನದ ಉದ್ದಕ್ಕೂ ದಿಟ್ಟತನದಿಂದ ಗಟ್ಟಿ ಧ್ವನಿಯಲ್ಲಿ ಜನಜಾಗೃತಿಯನ್ನು ಉಂಟು ಮಾಡಿದರು. ಅಧರ್ಮದ ವಿರುದ್ಧ ಸದಾ ‘ಧರ್ಮದ ದಂಡಯಾತ್ರೆ’ ಕೈಗೊಂಡರು. ಶ್ರೀಮದ್ರಂಭಾಪರಿ ಜಗದ್ಗುರು ಪೀಠದ ಉಜ್ವಲ ಪರಂಪರೆ ಉತ್ತರೋತ್ತರವಾಗಿ ಉಳಿದು ಬೆಳೆದು ಬಲಗೊಳ್ಳಲು ಸಂಕಲ್ಪಿಸಿ 1972ರ ಮೇ 15ರಂದು ಮಹಾರಾಷ್ಟ್ರದ ಭಾರ್ಸಿ ವೈರಾಗ ಹಿರೇಮಠದ ಪಂಡಿತವರ್ಯರಾದ ಶ್ರೀ ಷ. ಬ್ರ. ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳವರಿಗೆ ತಮ್ಮ ಉತ್ತರಾಧಿಕಾರದ ಜಗದ್ಗುರು ಪಟ್ಟದ ಅಧಿಕಾರವನ್ನು ಸಮಾನ ಪೀಠಾಚಾರ್ಯರ ಸಾನ್ನಿಧ್ಯದಲ್ಲಿ ಅನುಗ್ರಹಿಸಿ ‘ಶ್ರೀಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿ ದೇವ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು’ ಎಂಬ ನೂತನ ಅಭಿದಾನದಿಂದ ಆಶೀರ್ವದಿಸಿದರು.

ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸರ್ವತ್ರ ಸಂಚರಿಸಿ ಧರ್ಮಶಕ್ತಿಗೆ ಉಸಿರಾಗಿ ಕಾರ್ಯ ನಿರ್ವಹಿಸಿದರು. ವೀರಶೈವ ಧರ್ಮದ ಸಮಾನ ಪೀಠವಾಗಿರುವ ಶ್ರೀಕೇದಾರ ಜಗದ್ಗುರು ಪೀಠದ ಉಜ್ವಲ ವಿಕಾಸಕ್ಕೆ ಪೂರಕವಾಗಿ ಶ್ರೀಶಾಂತಲಿಂಗ ಜಗದ್ಗುರುಗಳಿಗೆ ಪಟ್ಟಾಭಿಷೇಕವನ್ನು ಮಾಡಿ 1975ರಲ್ಲಿ ಶ್ರೀಜಗದ್ಗುರು ಪಂಚ ಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ಧರ್ಮ ಜಾಗೃತಿ ಸಮ್ಮೇಳನ ನಡೆಸಿದ್ದು ಲಿಂಗೈಕ್ಯ ಶ್ರೀವೀರಗಂಗಾಧರ ಜಗದ್ಗುರುಗಳಲ್ಲಿದ್ದ ಎಲ್ಲ ಸಮಾನ ಗುರುಪೀಠಗಳ ಅಭಿಮಾನಕ್ಕೆ ಸಾಕ್ಷಿಯಾಗಿವೆ. ಸಾವಿರದೆಂಟು ಪಲ್ಲಕ್ಕಿ, ನೂರೊಂದು ತೇರು, ಸಹಸ್ರ ಕುಂಭಾಭಿಷೇಕ, ಕೋಟಿ ಬಿಲ್ವಾರ್ಚನೆಯಂತಹ ಅನೇಕ ಮಹತ್ಕಾರ್ಯಗಳನ್ನು ಕೈಗೊಂಡು ವಿನೂತನ ದಾಖಲೆಯನ್ನು ನಿರ್ವಿುಸಿದರು. ಶರನ್ನವರಾತ್ರಿ ದಸರಾ ನಾಡಹಬ್ಬವನ್ನು ವಿಧಾಯಕವಾಗಿ ವಿಸõತಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬರದ ನಾಡಿನಲ್ಲಿ ಮಳೆ ಸುರಿಸಿ ಶ್ರೀಜಗದ್ಗುರು ರೇಣುಕರ ಮಹಿಮೆಯನ್ನು ತೋರಿ ಮೆರೆದವರು. ಕುಂಭಾಭಿಷೇಕ ಮೂಲಕ ಶಕ್ತಿಮಾತೆ ಜಗಜ್ಜನನಿ ಶ್ರೀದೇವಿಯ ವರವನ್ನು ಪಡೆದಿದ್ದ ಅವರು ಭಕ್ತರ ಕಣ್ಣಿನಲ್ಲಿ ‘ಭೂಲೋಕದ ಶಿವ’ನಾಗಿ ಕಾಣುತ್ತಿದ್ದರು. ಪೂರ್ವಾಶ್ರಮದಲ್ಲಿ ತಾವು ಕಟ್ಟಿ ಬೆಳೆಸಿದ ಶ್ರೀಮದ್ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠವಾದ ಮುಕ್ತಿಮಂದಿರ ತಪೋಕ್ಷೇತ್ರದಲ್ಲಿ ಆಶ್ವೀಜ ಬಹುಳ ತೃತೀಯಾದಂದು (1982ರ ಅಕ್ಟೋಬರ್ 5) ತಮ್ಮ 79ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.

(ಲೇಖಕರು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಜಗದ್ಗುರು ಪೀಠದ 121ನೇ ಪೀಠಾಚಾರ್ಯರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net