

ಜಯಪುರ: ಜಯಪುರ ಗ್ರಾಪಂ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಮನೆ ಕಳೆದು ಕೊಂಡ ವೇಲಾಯುಧನ್, ರುಕ್ಮಿಣಿ ದಂಪತಿಗಳ ಮನೆಗೆ ಬುಧವಾರ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಭೇಟಿ ನೀಡಿ ವೃದ್ಧ ದಂಪತಿಗಳಿಗೆ ಎ ವರ್ಗದ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಳೆಯಿಂದ ವೇಲಾಯುಧನ್, ರುಕ್ಮಿಣಿ ದಂಪತಿಗಳ ಮನೆ ಹಾನಿಯಾಗಿದ್ದರಿಂದ ಸೂಕ್ತ ಪರಿಹಾರ ನೀಡುವಂತೆ ವೃದ್ಧ ದಂಪತಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅದರೆ ಅಧಿಕಾರಿಗಳು ಮನೆಗೆ ಅಧಿಕೃತ ದಾಖಲಾತಿಗಳಿದ್ದರೂ ಇದು ಅನಧಿಕೃತ ಮನೆ ಎಂದು ಕಡತ ತಯಾರಿಸಿ ಸರ್ಕಾರದಿಂದ ಮನೆ ಹಾನಿಗೆ ಬರಬೇಕಾದ ಐದು ಲಕ್ಷ ರೂ. ಪರಿಹಾರ ತಡೆ ಹಿಡಿದಿದ್ದರು. ಈ ಕುರಿತು ವಿಜಯವಾಣಿ ಆ.19ರ ಸಂಚಿಕೆಯಲ್ಲಿ ‘ವೃದ್ಧ ದಂಪತಿಯ ಪರಿಹಾರಕ್ಕೆ ಕಲ್ಲೆಸೆದ ಅಧಿಕಾರಿಗಳು’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿ ಗಮನಿಸಿದ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಂದು ಸ್ಥಳ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ವೇಲಾಯುಧನ್ ದಂಪತಿಗಳ ಮನೆ ಮಳೆಯಿಂದ ಸಂಪೂರ್ಣ ನಾಶವಾಗಿದ್ದು, ಸರ್ಕಾರದಿಂದ ಬರಬೇಕಾದ ಐದು ಲಕ್ಷ ರೂ. ಪರಿಹಾರಕ್ಕೆ ಇವರು ಅರ್ಹರಾಗಿದ್ದಾರೆ. ಈ ಕುರಿತು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದು, ಎ ವರ್ಗದ ಪರಿಹಾರಕ್ಕೆ ದಂಪತಿಗಳ ಮನೆಯನ್ನು ಸೇರಿಸಲು ಕ್ರಮ ವಹಿಸಲಾಗುವುದು. ಇದೊಂದು ನೈಜ ಪ್ರಕರಣವಾಗಿದ್ದು, ಅರ್ಹ ವ್ಯಕ್ತಿ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಬಾರದು. ಉತ್ತಮ ವರದಿ ಪ್ರಕಟಿಸಿದ ವಿಜಯವಾಣಿ ದಿನ ಪತ್ರಿಕೆಗೆ ಧನ್ಯವಾದ ಸಲ್ಲಿಸಿದರು.
ಸಾರ್ವಜನಿಕ ಕೆಲಸ ಮಾಡುವಾಗ ಸಣ್ಣ ಪುಟ್ಟ ಪ್ರಮಾದಗಳು ನಡೆಯುವುದು ಸಾಮಾನ್ಯ. ನಡೆದ ತಪ್ಪುಗಳನ್ನು ಸರಿಪಡಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಸರಿಪಡಿಸುವುದು ಸರ್ಕಾರಿ ಸಿಬ್ಬಂದಿ ಕರ್ತವ್ಯ. ಸರ್ಕಾರದ ಕೆಲಸ ಮಾಡುವಾಗ ದಾಖಲೆಗಳ ಕೊರತೆ, ಷರತ್ತುಗಳ ಪಾಲನೆ ವೇಳೆ ಕೆಲವೊಂದು ತಪ್ಪುಗಳು ನಡೆಯುತ್ತವೆ. ಅದರಂತೆ ವೇಲಾಯುಧನ್ ಅವರ ಕಡತ ತಯಾರಿ ವೇಳೆ ವ್ಯತ್ಯಾಸ ನಡೆದಿದೆ. ಈ ಕುಟುಂಬಕ್ಕೆ ಬರಬೇಕಾದ ಸೌಲಭ್ಯಗಳನ್ನು ಕಲ್ಪಿಸುವಂತೆ ಕೊಪ್ಪ ತಹಸೀಲ್ದಾರ್ ಮಂಜುಳಾ ಅವರಿಗೆ ಸೂಚಿಸಿದರು.
ಆರ್‌ಐ ಸುಧೀರ್, ಗ್ರಾಪಂ ಅಧ್ಯಕ್ಷ ಸಂಪತ್, ಉಪಾಧ್ಯಕ್ಷೆ ಜಯಾ ಮುರುಗೇಶ್, ಸದಸ್ಯರಾದ ಫಣಿರಾಜ್, ಕರುಣಾಕರ ಇದ್ದರು.
ಆಧಾರ್ ತಿದ್ದುಪಡಿಗೆ ಸಮಸ್ಯೆ: ಜಯಪುರ ನಾಡಕಚೇರಿಯಲ್ಲಿ ಜಿಪಿಎಸ್ ಉಪಕರಣ ಹಾಳಾಗಿ ಆಧಾರ್ ಕಾರ್ಡ್ ತಿದ್ದುಪಡಿಗೆ ಸಮಸ್ಯೆಯಾಗಿದೆ ಎಂಬ ಸಾರ್ವಜನಿಕರು ಎಸಿಗೆ ದೂರು ಸಲ್ಲಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗೆ ಕರೆಮಾಡಿ ಸಂಜೆಯೊಳಗೆ ಹೊಸ ಉಪಕರಣ ಕಳುಹಿಸಿ ವರದಿ ಮಾಡುವಂತೆ ಸೂಚಿಸಿದರು. ಆಧಾರ್ ಸಮಸ್ಯೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ಸಮಸ್ಯೆಗಳಾದಾಗ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಶೀಘ್ರದಲ್ಲಿ ಪರಿಹಾರಕ್ಕೆ ಕ್ರಮವಹಿಸಿದರೆ ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.