ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ... ಮುಂದಾಗಿದ್ದು ದುರಂತ

murder case
Published on

ಚಿಕ್ಕಬಳ್ಳಾಪುರ(ಗೌರಿಬಿದನೂರು): ಸೆ.5ರಂದು ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿಯ ಬಾವಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮೃತಳ ತಾಯಿ ಮತ್ತು ದೊಡ್ಡಪ್ಪನ ನಡುವಿನ ಅನೈತಿಕ ಸಂಬಂಧದ ಗುಟ್ಟು ಮಗಳ ಕಣ್ಣೆದುರಲ್ಲೇ ರಟ್ಟಾಯ್ತು... ಈ ರಹಸ್ಯ ಕಂಡ ಕ್ಷಣಾರ್ಧದಲ್ಲೇ ಘನಘೋರ ದುರಂತ ಸಂಭವಿಸಿದೆ. ಅಷ್ಟೇ ಅಲ್ಲ ಆಕೆಯನ್ನ ವಿಧಿ ಕಾಡಿದ ಪರಿಯೂ ಬೇಸರ ಮೂಡಿಸುತ್ತೆ.

ಗೌರಿಬಿದನೂರು ತಾಲೂಕಿನ ಮಣಿವಾಲದ ಫರ್ವಿನಾ ಮುಬಾರಕ್ (22) ಮೃತ ದುರ್ದೈವಿ. 2 ವರ್ಷದ ಹಿಂದೆ ಕುಟುಂಬಸ್ಥರ ಬಲವಂತಕ್ಕೆ ಮದುವೆಯಾಗಿದ್ದ ಫರ್ವಿನಾ ಗಂಡನನ್ನು ಬಿಟ್ಟು, ಮಣಿವಾಲದ ಶಿವಪ್ಪನನ್ನು ಪ್ರೀತಿಸಿ ಮದುವೆಯಾಗಿ, ಹೆಸರನ್ನು ಶಿಲ್ಪಾ ಎಂಬುದಾಗಿ ಬದಲಿಸಿಕೊಂಡಿದ್ದಳು. 2ನೇ ಗಂಡ ಶಿವಪ್ಪ ಅನಾರೋಗ್ಯದಿಂದ ಮೃತಪಟ್ಟಿದ್ದ. ಕೊನೆಗೆ ವಿನಯ್ ಕುಮಾರ್​ನನ್ನು ಮದುವೆಯಾಗಿದ್ಲು. ಆತನೂ ಅಪಘಾತದಲ್ಲಿ ಮೃತಪಟ್ಟಿದ್ದ. ಕೈ ಹಿಡಿದವರ ಆಸರೆ ಕೈ ತಪ್ಪಿದ್ದರಿಂದ ಕೊನೆಗೆ ತವರು ಮನೆಗೆ ಬಂದು ನೆಲೆಸಿದ್ದಳು.

ಇದ್ದಕ್ಕಿದ್ದಂತೆ ಫರ್ವಿನಾಳ ಶವ ಸೆ.5ರಂದು ವಾಟದಹೊಸಹಳ್ಳಿ ಗ್ರಾಮದ ಬಾವಿಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾವಿ ಬಳಿಯ ಮರಕ್ಕೆ ನೇಣುಹಾಕಿಕೊಂಡಿದ್ದು, ಮರದ ಕೊಂಬೆ ಮೃತದೇಹದ ಸಮೇತ ಬಾವಿಗೆ ಬಿದ್ದಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಮೂವರನ್ನು ಮದುವೆಯಾದರೂ ವೈವಾಹಿಕ ಬದುಕು ಹಾಳಾಯ್ತು ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ಕಂಡು ಬಂದಿತ್ತಾದರೂ ಪೊಲೀಸರಿಗೆ ಮಾತ್ರ ಇದು ಕೊಲೆ ಎಂದು ಅನುಮಾನ ಮೂಡಿತ್ತು. ಈ ಅನುಮಾನದ ಜಾಡುಹಿಡಿದು ಹೊರಟ ಪೊಲೀಸರು 20 ದಿನದಲ್ಲೇ ಫರ್ವಿನಾಳ ಸಾವಿನ ರಹಸ್ಯ ಬಯಲು ಮಾಡಿದ್ದಾರೆ.

ಫರ್ವಿನಾ​ಳನ್ನು ಈಕೆಯ ತಾಯಿ ಗುಲ್ಜಾರ್ ಭಾನು (45) ಮತ್ತು ದೊಡ್ಡಪ್ಪ ಪ್ಯಾರೇಜಾನ್ ಎಂಬುವರು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಇದಕ್ಕೆ ಫರ್ವಿನಾಳ ತಂದೆ ಫಯಾಜ್ (50) ಕೂಡ ಸಾಥ್​ ಕೊಟ್ಟಿದ್ದ. ಈ ಮೂವರನ್ನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಕೊಲೆ ಏಕಾಯ್ತು ಗೊತ್ತಾ?

ಫರ್ವಿನಾಳ ತಾಯಿ ಗುಲ್ಜಾರ್​ ಬಾನು ಹಾಗೂ ಗುಲ್ಜಾರ್​ನ ಅಕ್ಕನ ಗಂಡ ಪ್ಯಾರೇಜಾನ್​ ನಡುವಿನ ಅಕ್ರಮ ಸಂಬಂಧ ಇತ್ತಂತೆ. ಗಂಡಂದಿರನ್ನು ಕಳೆದುಕೊಂಡು ದಿಕ್ಕೆಟ್ಟಿದ್ದ ಫರ್ವಿನಾ ತವರಿಗೆ ಬಂದಿದ್ದಳು. ಆ ವೇಳೆ ತಾಯಿ-ದೊಡ್ಡಪ್ಪ ಇಬ್ಬರೂ ಏಕಾಂತದಲ್ಲಿ ಇರುವುದನ್ನ ಫರ್ವಿನಾ ನೋಡಿಬಿಟ್ಟಿದ್ಲು. ಅಕ್ರಮ ಸಂಬಂಧದ ಗುಟ್ಟು ಎಲ್ಲಿ ರಟ್ಟಾಗುತ್ತೋ ಎಂದು ಮಗಳನ್ನೇ ಕೊಲೆಗೆ ಸಂಚು ರೂಪಿಸಿ ಶ್ರೀನಿವಾಸಚಾರ್ಲಹಳ್ಳಿ ಸಮೀಪದ ಮಾವಿನ ತೋಪಿಗೆ ಫರ್ವಿನಾಳನ್ನು ಕರೆಸಿಕೊಂಡು ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೃತದೇಹವನ್ನು ಬಾವಿಯಲ್ಲಿ ಬಿಸಾಡಿ ಹೋಗಿದ್ದರು. ಬಳಿಕ ಇದು ಆತ್ಮಹತ್ಯೆ ಎಂದು ನಾಟಕವಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net