

ಸಾಗರ: ವಿದ್ಯಾರ್ಥಿ ಜೀವನದಲ್ಲಿ ಹಾಕುವ ಶ್ರಮ ಭವಿಷ್ಯದಲ್ಲಿ ನಿಮ್ಮ ಬದುಕನ್ನು ಸುಂದರವಾಗಿಡುವ ಜತೆಗೆ ಪಾಲಕರ ನಿರೀಕ್ಷೆ ನಿಜವಾಗಿಸಲು ನೆರವಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ, ಪ್ರಿಯದರ್ಶಿನಿ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಇಂದಿರಾ ಗಾಂಧಿ ಕಾಲೇಜು ರಾಜ್ಯದಲ್ಲಿಯೇ ಮಾದರಿಯಾಗಿದೆ. ವಿದ್ಯಾರ್ಥಿನಿಯರು ಓದಿನ ಜತೆಗೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕಾಲೇಜಿನ ಅಭಿವೃದ್ಧಿಗೆ ಬೇಕಾದ ಅಗತ್ಯ ಸೌಲಭ್ಯ ನೀಡಲಾಗಿದೆ. ಆದರೂ ಕೆಲವರು ಹೊರ ಜಿಲ್ಲೆಗಳಿಗೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸುತ್ತಿರುವುದು ಬೇಸರದ ಸಂಗತಿ. ಕಾಲೇಜಿಗೆ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಮಾತನಾಡಿ, ವಿದ್ಯೆ ನಮಗೆ ಮಾನವೀಯ ಮೌಲ್ಯವನ್ನು ಕಲಿಸುತ್ತದೆ. ವಿದ್ಯಾರ್ಥಿ ಸಂದರ್ಭದಲ್ಲಿ ಸಾಧನೆಗೆ ಹೆಚ್ಚಿನ ಅವಕಾಶ ಇರುತ್ತದೆ. ನಿಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿಕೊಳ್ಳಲು ಇದು ಸಕಾಲ. ಇಂದಿರಾ ಗಾಂಧಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ನಮ್ಮೂರಿನ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯೆ ಪ್ರೊ. ಎಚ್.ರಾಜೇಶ್ವರಿ, ವರ್ಗಾವಣೆಗೊಂಡ ಪ್ರಾಧ್ಯಾಪಕರಾದ ಡಾ. ಎಂ.ರಂಗಣ್ಣನವರ್, ಡಾ. ಮಹಾವೀರ, ಮಾರುತಿ ಗೌಡ, ಎಚ್.ಲೋಕೇಶಪ್ಪ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ಬಿ.ಎಚ್.ಲಿಂಗರಾಜ್, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಎಲ್.ಚಂದ್ರಪ್ಪ, ಪ್ರಾಚಾರ್ಯ ಪ್ರೊ. ಟಿ.ಚಂದ್ರಶೇಖರ, ಪ್ರಮುಖರಾದ ಡಾ. ಶಿವಾನಂದ ಭಟ್, ಡಾ. ರತ್ನಾಕರ್, ಯತೀಶ್‌ಕುಮಾರ್ ಇತರರಿದ್ದರು.