ಓ ವಿಧಿಯೇ ನೀನೆಷ್ಟು ಕ್ರೂರಿ... ಖುಷಿಯಿಂದ ಅಪ್ಪನ ಹೊಸ ಆಟೋ ಏರಿದ ಮಗಳು ಹೊರಟಿದ್ದು ಸಾವಿನ ಸವಾರಿ! Auto rickshaw

Auto rickshaw
Published on

ಚೆನ್ನೈ: ದೀಪಾವಳಿ ಹಬ್ಬಕ್ಕೂ ಮುನ್ನ ಅಪ್ಪ ಖರೀದಿಸಿದ ಹೊಸ ಆಟೋ ( Auto rickshaw ) ಏರಿ ಊರು ಸುತ್ತಲು ಹೊರಟ ಪುಟ್ಟ ಮಗಳು ದುರಂತ ಸಾವಿಗೀಡಾದ ಆಘಾತಕಾರಿ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ವಿವರಕ್ಕೆ ಬರುವುದಾದರೆ, ರಾಜ್‌ಕುಮಾರ್ ಎಂಬಾತ ತಿರುಚ್ಚಿ ಜಿಲ್ಲೆಯ ಮನ್ನಚನಲ್ಲೂರಿನ ಪಕ್ಕದಲ್ಲಿರುವ ದಿಲ್ಲಂಪಟ್ಟಿಯ ನಿವಾಸಿ. ಈ ವೃತ್ತಿಯಲ್ಲಿ ಆಟೋ ಚಾಲಕ. ಆತನಿಗೆ ಗ್ರೇಸೀಕಾ ಹೆಸರಿನ 9 ವರ್ಷದ ಪುತ್ರಿ ಮತ್ತು ಲಿಥನ್ ರಾಮ್ ಹೆಸರಿನ 7 ವರ್ಷದ ಪುತ್ರನಿದ್ದಾನೆ. ಗ್ರೇಸೀಕಾ ಆ ಪ್ರದೇಶದ ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದಳು.

ಇತ್ತೀಚೆಗಷ್ಟೇ ರಾಜ್‌ಕುಮಾರ್ ಹೊಸ ಆಟೋವನ್ನು ಖರೀದಿ ಮಾಡಿದರು. ಇದೇ ಖುಷಿಯಲ್ಲಿದ್ದ ಮಕ್ಕಳು ಆಟೋದಲ್ಲಿ ಊರು ಸುತ್ತಾಡಿಸುವಂತೆ ಅಪ್ಪನ ಬಳಿ ನಿನ್ನೆ (ಅ.14) ಕೇಳಿಕೊಂಡರು. ಇದಾದ ಬಳಿಕ ರಾಜ್‌ಕುಮಾರ್ ತನ್ನ ಮಗ ಮತ್ತು ಮಗಳನ್ನು ಆಟೋದಲ್ಲಿ ಕರೆದುಕೊಂಡು ಊರು ಸುತ್ತಾಡು ಹೋದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ದಿಲ್ಲಂಪಟ್ಟಿ ಬಳಿಯ ವೆಲ್ಲಕುಲಂ ಎಂಬ ಪ್ರದೇಶದಲ್ಲಿ ಆಟೋ ಹೋಗುವಾಗ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರೆಸಿಕಾ ಸ್ಥಳದಲ್ಲೇ ಮೃತಪಟ್ಟಳು. ರಾಜ್‌ಕುಮಾರ್ ಮತ್ತು ಲಿಥನ್ ರಾಮ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತಮ್ಮ ಮಗಳು ತಮ್ಮ ಕಣ್ಣೆದುರೇ ಮೃತಪಟ್ಟಿದ್ದನ್ನು ನೋಡಿ ರಾಜ್‌ಕುಮಾರ್ ಆಕ್ರಂದನ ಮುಗಿಲು ಮುಟ್ಟಿತು. ಅಪಘಾತದ ಮಾಹಿತಿ ತಿಳಿದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಈ ಬಗ್ಗೆ ಮಾಹಿತಿ ಪಡೆದ ಮನ್ನಚನ್ನಲ್ಲೂರು ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸೆಂಥಿಲ್‌ಕುಮಾರ್, ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಗ್ರೆಸಿಕಾ ಅವರ ಶವವನ್ನು ವಶಕ್ಕೆ ಪಡೆದು ಶವಪರೀಕ್ಷೆಗಾಗಿ ಶ್ರೀರಂಗಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಾವಿಗೆ ಇಡೀ ಊರೇ ಕಂಬನಿ ಮಿಡಿದಿದೆ. ಅಪ್ಪನ ಕಣ್ಣೆದ್ದುರಲ್ಲೇ ಮಗಳ ಜೀವವನ್ನು ಕಸಿದುಕೊಂಡ ವಿಧಿಯ ಕ್ರೂರತ್ವಕ್ಕೆ ಈ ಘಟನೆ ಸಾಕ್ಷಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net