ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ: ಆನ್​ಲೈನ್​ ತರಗತಿ ಗೊಂದಲವೇ ಕಾರಣ

Commits Suicide Web
Published on

ಮಲಪ್ಪುರಂ: 9ನೇ ತರಗತಿಯ ಬಾಲಕಿಯೋರ್ವಳು ತನಗೇ ತಾನು ಬೆಂಕಿ ಹಚ್ಚಿಕೊಂಡು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ವಾಲಂಚೇರಿಯಲ್ಲಿ ನಡೆದಿದೆ.

14ವರ್ಷದ ಬಾಲಕಿ ದೇವಿಕಾ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನಾನು ಹೋಗುತ್ತಿದ್ದೇನೆ ಎಂದು ಡೆತ್​ ನೋಟ್​ ಬರೆದಿಟ್ಟಿದ್ದಾಳೆ. ಈ ಬಾಲಕಿಯ ಸಾವಿಗೆ ಆನ್​ಲೈನ್​ ತರಗತಿಯೇ ಕಾರಣ ಎನ್ನಲಾಗಿದೆ.

ಲಾಕ್​ಡೌನ್​ನಿಂದಾಗಿ ಶಾಲೆಗಳು ತೆರೆಯುತ್ತಿಲ್ಲ. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಆನ್​ಲೈನ್​ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಬಾಲಕಿಯ ಮನೆಯಲ್ಲಿ ಕಂಪ್ಯೂಟರ್​ ಆಗಲಿ, ಸ್ಮಾರ್ಟ್​ ಫೋನ್​ ಆಗಲಿ ಇರಲಿಲ್ಲ. ಇದೇ ಕಾರಣಕ್ಕೆ ಆಕೆಗೆ ಆನ್​ಲೈನ್​ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ತೀವ್ರವಾಗಿ ಮನನೊಂದ ಅವಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆ ದಿನಗೂಲಿ ಕಾರ್ಮಿಕ. ಅವರಿಗೆ ತುಂಬ ದಿನಗಳಿಂದ ಆರೋಗ್ಯ ಸರಿಯಿಲ್ಲ. ಇದ್ದ ಒಂದು ಟಿವಿ ಕೂಡ ಹಾಳಾಗಿ, ಅದನ್ನು ದುರಸ್ತಿ ಮಾಡಿಸಲೂ ಆಗಲಿಲ್ಲ. ಸ್ಮಾರ್ಟ್​ಫೋನ್​, ಕಂಪ್ಯೂಟರ್​ ಕೊಳ್ಳುವಷ್ಟು ಶಕ್ತಿ ನಮಗಿಲ್ಲ. ಅವಳಿಗೆ ಆನ್​ಲೈನ್​ ತರಗತಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ತುಂಬ ಬೇಸರವಾಗಿತ್ತು. ನಿನ್ನೆ ಮಧ್ಯಾಹ್ನ 3.30ರಿಂದ ಬಾಲಕಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹುಡುಕಿದಾಗ ಅವರ ಮನೆಯ ಪಕ್ಕದ ಮನೆಯೊಂದರ ಬಳಿ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇರಳ ಶಿಕ್ಷಣ ಸಚಿವ ಪ್ರೊ. ಸಿ.ರವೀಂದ್ರನಾಥ್​ ಅವರು ದೇವಿಕಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ನಾವು ಆನ್​ಲೈನ್​ ಕ್ಲಾಸ್​ಗಳನ್ನು ಪ್ರಯೋಗಾತ್ಮಕವಾಗಿಯಷ್ಟೇ ನಡೆಸುತ್ತಿದ್ದೇವೆ. ಒಮ್ಮೆ ನಡೆದ ತರಗತಿ ಮತ್ತೆಮತ್ತೆ ಟೆಲಿಕಾಸ್ಟ್​ ಆಗುತ್ತದೆ. ಅಷ್ಟರಲ್ಲಿ ಈ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರವೀಂದ್ರನಾಥ್​ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಪ್ರಾರಂಭ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net