

ಹಾಂಗ್ಕಾಂಗ್: ಚೀನಾದ ಹುಬೈ ಪ್ರಾಂತ್ಯದ ಶಿಯಾನ್ ನಗರದಲ್ಲಿ ಭಾನುವಾರ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 138 ಜನರಿಗೆ ಗಾಯವಾಗಿರುವುದಾಗಿ ವರದಿಯಾಗಿದೆ.
ಭಾನುವಾರ ಬೆಳಗ್ಗೆ 6.30 ರ ಸಮಯಕ್ಕೆ ಈ ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ. ಸ್ಫೋಟದಿಂದಾಗಿ ಅಲ್ಲಿನ ಆಹಾರ ಮಾರುಕಟ್ಟೆಯ ಕಟ್ಟಡ ಕುಸಿದಿದೆ. ಅಲ್ಲಿ ಕೆಲವರು ಬೆಳಗ್ಗಿನ ಉಪಹಾರ ಸೇವಿಸುತ್ತಿದ್ದು, ಇನ್ನು ಅನೇಕರು ಆಹಾರ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದರು ಎನ್ನಲಾಗಿದೆ. ಕಟ್ಟಡ ಕುಸಿದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಾಯಾಳುಗಳಲ್ಲಿ 37 ಮಂದಿ ಗಂಭೀರ ಗಾಯಾಳುಗಳಾಗಿದ್ದಾರೆ. 150ಕ್ಕೂ ಅಧಿಕ ಜನರನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳಿಗೆ ಹೆಚ್ಚಿನ ರಕ್ತದ ಅವಶ್ಯಕತೆ ಇದ್ದು, ರಕ್ತದಾನಿಗಳು ಸಹಾಯಕ್ಕೆ ಮುಂದೆ ಬರಬೇಕು ಎಂದು ಸ್ಥಳೀಯ ಆಡಳಿತ ಕೇಳಿಕೊಂಡಿದೆ. (ಏಜೆನ್ಸೀಸ್)