ಕಾಡಿನಲ್ಲಿ ಬಸವನ ಹುಳು ತಿಂದೇ ಬದುಕುತ್ತಿದ್ದ ವ್ಯಕ್ತಿ! ನಾಡಿಗೆ ಬಂದೊಡನೆ ಅರೆಸ್ಟ್​ ಮಾಡಿದ ಪೊಲೀಸರು

man
Published on

ಕ್ಯಾನ್ಬೆರಾ: ಯಾವುದೋ ವಿಚಾರಕ್ಕೆ ನಾಡಿನಿಂದ ಪರಾರಿಯಾದ ವ್ಯಕ್ತಿಯೊಬ್ಬ ಕಾಡೊಳಗೆ ನಗ್ನನಾಗಿ ಜೀವನ ಆರಂಭಿಸಿದ್ದು, ವಾರಗಳ ಕಾಲ ಬಸವನ ಹುಳುವನ್ನೇ ತಿಂದುಕೊಂಡು ಬದುಕಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಆತ ನಾಡಿಗೆ ವಾಪಾಸು ಬಂದ ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆಸ್ಟ್ರೇಲಿಯಾ ನಿವಾಸಿ ಒಬ್ಬನ ಮೇಲೆ ದರೋಡೆ ಸೇರಿ ಅನೇಕ ರೀತಿಯ ಪ್ರಕರಣಗಳು ದಾಖಲಾಗಿತ್ತು. ಆ ಕಾರಣ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ಕಾಡೊಳಗೆ ಹೊಕ್ಕಿದ್ದಾನೆ. ಕಾಡೊಳಗೆ ಬಂದವನಿಗೆ ವಾಪಾಸು ಹೋಗುವ ದಾರಿ ತಿಳಿಯದಾಗಿದೆ. ಎಷ್ಟೇ ಹುಡುಕಿದರೂ ಆತನಿಗೆ ವಾಪಾಸು ಹೋಗಲು ಸಾಧ್ಯವಾಗಿಲ್ಲ. ಆ ಕಾಡೊಳಗೆ ನೀರಿನ ಜರಿಯಿದ್ದು, ಅದರಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಮೊಸಳೆಗಳಿಂದ ಜೀವ ಉಳಿಸಿಕೊಂಡಿದ್ದ ಆತ ಅಲ್ಲಿ ಓಡಾಡುತ್ತಿದ್ದ ಬಸವನ ಹುಳುಗಳನ್ನೇ ಹಿಡಿದು ತಿನ್ನುತ್ತಿದ್ದ. ಕಾಡಿನ ಮರಗಿಡ, ಪೊದೆಗಳಿಗೆ ಸಿಕ್ಕು, ಆತನ ಬಟ್ಟೆಯಷ್ಟೂ ಹರಿದು ಹೋಗಿ ಆತ ಸಂಪೂರ್ಣ ನಗ್ನನಾಗಿದ್ದ.

ಇತ್ತೀಚೆಗೆ ಕೆವಿನ್​ ಮತ್ತು ಕ್ಯಾಮ್​ ಫೌಸ್ಟ್​ ಹೆಸರಿನ ಮೀನುಗಾರರು ಮೀನು ಹಿಡಿಯಲೆಂದು ಕಾಡಿನಲ್ಲಿದ್ದ ನದಿಗೆ ತೆರಳಿದ್ದರು. ಆ ಸಮಯದಲ್ಲಿ ಮನುಷ್ಯನ ಧ್ವನಿ ಅವರಿಗೆ ಕೇಳಿಸಿದೆ. ತಕ್ಷಣ ಧ್ವನಿ ಬರುತ್ತಿದ್ದ ಕಡೆ ಹೊರಟವರಿಗೆ ಆ ವ್ಯಕ್ತಿ ಎದುರಾಗಿದ್ದಾನೆ. ನಗ್ನನಾಗಿ ಬಹಳಷ್ಟು ಸೊರಗಿದ್ದ ಆತನನ್ನು ಹತ್ತಿರದ ನಗರಕ್ಕೆ ಕರೆತರಲಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಬಂದಿದ್ದು, ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net