

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳಿಗೆ ಸ್ವಯಂ ಉದ್ಯೋಗ ಮತ್ತು ಹೆಚ್ಚುವರಿ ಆದಾಯದ ಹೆಸರಿನಲ್ಲಿ ಕಿಡಿಗೇಡಿಗಳು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.
ಶ್ವೇತಾ ಹಣ ಕಳೆದುಕೊಂಡವರು. 27 ವರ್ಷ ವಯಸ್ಸಿನ ಶ್ವೇತಾ ಚಿಕ್ಕಬಳ್ಳಾಪುರ ಡಿಸಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಪರಿಚಿತರು ತನ್ನ ಮೊಬೈಲ್ಗೆ ಕಳಿಸಿದ್ದ ಸ್ವಯಂ ಉದ್ಯೋಗ ಹಾಗೂ ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶ ಎಂಬ ಲಿಂಕ್ನಲ್ಲಿ ಶ್ವೇತಾ ತನ್ನ ಹೆಸರು ನೋಂದಾಯಿಸಿಕೊಂಡಿದ್ದರು. ವಿವಿಧ ಹಂತಗಳ ಗಳಿಕೆ, ಲಾಭಾಂಶ ಎಂಬುದು ಸೇರಿ ನಾನಾ ಕಾರಣಗಳಿಗಾಗಿ ಅಪರಿಚಿತರು ಶ್ವೇತಾ ಅವರಿಂದ ಆನ್ಲೈನ್ನಲ್ಲಿ 3.71 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ.
ಕೆಲ ದಿನಗಳ ಬಳಿಕ ತಮಗೆ ಕಂಪನಿಯಿಂದ ಬಂದಿರಬಹುದಾದ ಆದಾಯ ಎಷ್ಟು ಎಂಬ ಮಾಹಿತಿಗಾಗಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ಶ್ವೇತಾಗೆ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.