ಸಾವಿರ ವರ್ಷಗಳಿಗೆ ಬುನಾದಿ; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

PM Modi
Published on

ನಾಗ್ಪುರ: ‘ಮೋದಿ ಪ್ರಧಾನಿಯಾಗಿ ಮೂರನೇ ಸಲ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೆ ಅಪಾಯ’ ಎಂದು ವಿಪಕ್ಷಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ತುರ್ತ ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರಲಿಲ್ಲವೇ?’ ಎಂದು ವಿರೋಧಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಸಲ ಮಾಡುವ ಮತದಾನ ಬರೀ ಮೋದಿಯ ಆಯ್ಕೆಗಲ್ಲ, ಅದು ದೇಶದ ಮುಂದಿನ 1 ಸಾವಿರ ವರ್ಷಗಳಿಗೆ ಹಾಕುವ ಬುನಾದಿ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕನ್ಹನ್​ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ ಅವರು, ವಿಪಕ್ಷಗಳಿಗೆ ಸಂವಿಧಾನ ಅಷ್ಟು ಮುಖ್ಯವಾಗಿದ್ದರೆ 2019ರಲ್ಲಿ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸುವ ವರೆಗೆ ಯಾಕೆ ಅದು ಇಡೀ ದೇಶದಲ್ಲಿ ಮಹತ್ವದ್ದಾಗಿರಲಿಲ್ಲ? ಪ್ರತ್ಯೇಕತಾವಾದಿಗಳ ಕುರಿತು ಸೌಮ್ಯಧೋರಣೆ ಕಾರಣಕ್ಕೆ ವಿಪಕ್ಷಗಳು 370ನೇ ವಿಧಿ ರದ್ದು ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಆರೋಪಿಸಿದರು.

370ನೇ ವಿಧಿ ರದ್ದುಗೊಳಿಸಿದ್ದರಿಂದ ಕೇಂದ್ರಾಡಳಿತ ಪ್ರದೇಶದ ದಲಿತರು, ಬುಡಕಟ್ಟು ಸಮುದಾಯದವರು ಇಂದು ಸಾಂವಿಧಾನಿಕ ಹಕ್ಕುಗಳನ್ನು ಹೊಂದುವಂತಾಗಿದೆ. ಅದಕ್ಕೂ ಮೊದಲು ಕಾಂಗ್ರೆಸ್ ವೋಟ್​ಬ್ಯಾಂಕ್ ರಾಜಕಾರಣ ಸಲುವಾಗಿ ಅವರನ್ನೆಲ್ಲ ನಿರ್ಲಕ್ಷಿಸಿತ್ತು. ಈಗ 370ನೇ ವಿಧಿ ರದ್ದುಗೊಳಿಸಿದ್ದಕ್ಕೆ ಸಂವಿಧಾನಕರ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಆತ್ಮವೂ ತಮಗೆ ಆಶೀರ್ವದಿಸುತ್ತಿದೆ ಎಂದು ಮೋದಿ ಹೇಳಿದರು. ವಿಪಕ್ಷಗಳು ದೇಶದ ಪರಂಪರೆ ಮತ್ತು ಅಭಿವೃದ್ಧಿಯ ವಿರೋಧಿಗಳು. ಮುಂದಿನ ಐದು ವರ್ಷಗಳಿಗೆ ನಿಮ್ಮ ಕನಸು ಮೋದಿಯ ಸಂಕಲ್ಪ. ನನ್ನ ಪ್ರತಿಯೊಂದು ಕ್ಷಣವೂ ನಿಮ್ಮ ಶ್ರೇಯಸ್ಸು ಹಾಗೂ ದೇಶದ ಅಭಿವೃದ್ಧಿಗೆ ಅರ್ಪಣೆ ಎಂದರು.

ಮಂದಿರ ನಿರ್ವಣಕ್ಕೆ ಅಡ್ಡಿ: ಶ್ರೀರಾಮಮಂದಿರ ನಿರ್ವಣಕ್ಕೆ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಜನತಾ ದಳದವರು ಅಡ್ಡಿಪಡಿಸಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ. ಬಿಹಾರದ ಗಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಆರ್​ಜೆಡಿ ಕಳೆದ 75 ವರ್ಷಗಳಿಂದ ರಾಮಮಂದಿರ ನಿರ್ವಣಕ್ಕೆ ಅಡ್ಡಿ ಆಗಿದ್ದವು. ನೀವು ಮೋದಿ ಅವರನ್ನು ಎರಡನೇ ಸಲ ಪ್ರಧಾನಿ ಆಗಿಸಿದಿರಿ. ಅವರು ಬರೀ ಕೇಸ್ ಮಾತ್ರ ಗೆದ್ದಿಲ್ಲ, ಜತೆಗೆ ಭೂಮಿಪೂಜೆ ಮಾಡಿ ಬಾಲರಾಮ ಪ್ರತಿಷ್ಠಾಪನೆಯನ್ನೂ ಮಾಡಿದರು ಎಂದು ಷಾ ಹೇಳಿದರು. ಓಲೈಕೆ ಕಾರಣಕ್ಕೇ ಅವೆರಡೂ ಪಕ್ಷಗಳು ಜಮ್ಮು-ಕಾಶ್ಮೀರದಲ್ಲಿನ 370ನೇ ವಿಧಿ ರದ್ದು ವಿರುದ್ಧ ಪ್ರತಿಭಟನೆ ನಡೆಸುತ್ತಿವೆ ಎಂದೂ ಆರೋಪಿಸಿದರು. ಬಿಹಾರ ಜನತೆ 2014ರಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ 31ರಲ್ಲಿ ಬಿಜೆಪಿ ಮೈತ್ರಿಕೂಟವನ್ನು ಗೆಲ್ಲಿಸಿದ್ದರು, 2019ರಲ್ಲಿ 39 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದರು, ಈ ಸಲ ನಲವತ್ತೂ ಕ್ಷೇತ್ರಗಳನ್ನು ಗೆಲ್ಲಿಸಿಕೊಡಿ ಎಂದು ಷಾ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net