ಚುನಾವಣೆ ಕಣದಲ್ಲಿ 8000 ಅಭ್ಯರ್ಥಿಗಳ ಮಹಾಪೂರ

Election Commission
Published on

ನವದೆಹಲಿ: ಮಹಾರಾಷ್ಟ್ರದ 288 ಸದಸ್ಯರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿದ್ದು, ಆಡಳಿತಾರೂಢ ಬಿಜೆಪಿ 148 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಆಡಳಿತ ಮತ್ತು ವಿಪಕ್ಷಗಳ ಮೈತ್ರಿಕೂಟದಲ್ಲಿ ಅತ್ಯಧಿಕ ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. 103 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿರುವ ಕಾಂಗ್ರೆಸ್ ನಂತರದ ಸ್ಥಾನದಲ್ಲಿದೆ. ಮಂಗಳವಾರ ನಾಮನಿರ್ದೇಶನ ಪ್ರಕ್ರಿಯೆ ಅಂತ್ಯದ ವೇಳೆಗೆ ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಸೇರಿ ಸುಮಾರು 8,000 ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ 80, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನಾಯಕತ್ವದ ಎನ್​ಸಿಪಿಯಿಂದ 53 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಐದು ಸ್ಥಾನಗಳನ್ನು ಮಹಾಯುತಿಯ ಇತರೆ ಮಿತ್ರಪಕ್ಷ ಗಳಿಗೆ ಹಂಚಲಾಗಿದೆ. ವಿರೋಧಿ ಮೈತ್ರಿಕೂಡ ಮಹಾ ವಿಕಾಸ್ ಅಗಾಡಿಯಲ್ಲಿ ಕಾಂಗ್ರೆಸ್ 103, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 89 ಮತ್ತು ಶರದ್ ಪವಾರ್ ಅವರ ಎನ್​ಸಿಪಿ (ಎಸ್​ಪಿ) 87 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಎಂವಿಎಯ ಇತರೆ ಮಿತ್ರರಿಗೆ ಆರು ಸ್ಥಾನಗಳನ್ನು ನೀಡಲಾಗಿದೆ.

ನವೆಂಬರ್ 20ರಂದು ನಡೆಯಲಿರುವ ಚುನಾವಣೆಗೆ ನಾಸಿಕ್ ಜಿಲ್ಲೆಯೊಂದರಲ್ಲೇ 361 ಅಭ್ಯರ್ಥಿಗಳು 506 ನಾಮಪತ್ರಗಳನ್ನು ಸಲ್ಲಿಸಿದ್ದು, ಮಂಗಳವಾರ 255 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಲೆಗಾಂವ್ ಔಟರ್ ಕ್ಷೇತ್ರದಿಂದ ಕ್ಯಾಬಿನೆಟ್ ಮಂತ್ರಿ ದಾದಾ ಭೂಸೆ (ಶಿವಸೇನಾ) ಮತ್ತು ಯೆಯೋಲಾದಿಂದ ಛಗನ್ ಭುಜಬಲ್ (ಎನ್​ಸಿಪಿ) ಸೇರಿ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ರಾಜಕೀಯದ ಜಗಜಟ್ಟಿಗಳು ಕಣದಲ್ಲಿದ್ದಾರೆ.

ನವಾಬ್ ಮಲಿಕ್​ಗೆ ಪರ-ವಿರೋಧ: ಮಂಖುರ್ದ್ ಶಿವಾಜಿ ನಗರ ಕ್ಷೇತ್ರಕ್ಕೆ ಹಣಕಾಸು ಅವ್ಯವಹಾರ ಆರೋಪ ದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿರುವ ನವಾಬ್ ಮಲಿಕ್​ಗೆ ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ಟಿಕೆಟ್ ನೀಡಿರುವುದನ್ನು ಮಿತ್ರಪಕ್ಷ ಬಿಜೆಪಿ ಕಟುವಾಗಿ ಟೀಕಿಸಿದೆ. ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಾದ ಛೋಟಾ ಶಕೀಲ್, ಟೈಗರ್ ಮೆಮೊನ್ ಒಳಗೊಂಡ ಅಕ್ರಮ ಹಣ ವರ್ಗಾವಣೆ ನವಾಬ್ ಮಲಿಕ್ ಆರೋಪಿ ಆಗಿದ್ದಾರೆ. ಮಲಿಕ್ ಎನ್​ಸಿಪಿ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ 2 ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ ಎನ್​ಸಿಪಿ ಬೆಂಬಲದ ನಂತರ, ತಮ್ಮನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೊಷಿಸಿಕೊಂಡಿದ್ದಕ್ಕೆ ಬಿಜೆಪಿ ಆಕ್ರೋಶಗೊಂಡಿದೆ. ನವಾಬ್ ಮಲಿಕ್ ಕುರಿತ ಪಕ್ಷದ ನಿಲುವು ಸ್ಪಷ್ಟ. ಬಿಜೆಪಿ ನವಾಬ್ ಪರ ಪ್ರಚಾರ ಮಾಡುವುದಿಲ್ಲ. ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿತ ಪ್ರಕರಣದಲ್ಲಿ ಆರೋಪಿ ಆಗಿರುವ ಯಾರನ್ನೂ ನಾವು ಅನುಮೋದಿಸುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಆಶಿಷ್ ಶೆಲಾರ್ ಹೇಳಿದ್ದಾರೆ.

ನವಾಬ್ ಮಲಿಕ್​ಗೆ ಟಿಕೆಟ್ ನೀಡದಂತೆ ಅಜಿತ್ ಪವಾರ್ ಮೇಲೆ ಬಿಜೆಪಿ ಒತ್ತಡ ಹೇರಿತ್ತು ಎಂದು ಎನ್​ಸಿಪಿ ಮೂಲಗಳು ತಿಳಿಸಿವೆ. ಆದರೆ ನಾವು ಬಿಜೆಪಿಯೊಂದಿಗೆ ಅಗತ್ಯಕ್ಕಿಂತ ಹೆಚ್ಚು ರಾಜಿ ಮಾಡಿಕೊಂಡಿದ್ದೇವೆ ಎಂದು ಪವಾರ್ ಆಪ್ತ ವಲಯ ಅಸಮಾಧಾನ ಹೊಂದಿದ್ದರಿಂದ ನವಾಬ್ ಮಲಿಕ್ ಬೆಂಬಲಿಸಲು ಎನ್​ಸಿಪಿ ನಿರ್ಧರಿಸಿತು ಎನ್ನಲಾಗಿದೆ. ಮಲಿಕ್ ಮುಸ್ಲಿಂ ಸಮಾಜದ ಪ್ರಮುಖ ಮುಖವಾಗಿದ್ದು, ಲೋಕಸಭೆ ಚುನಾವಣೆ ವೇಳೆ ಅವರ ಬೆಂಬಲ ಇಲ್ಲವಾಗಿದ್ದು ಭಾರಿ ನಷ್ಟ ಉಂಟುಮಾಡಿತು ಎಂದು ಎನ್​ಸಿಪಿಯ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಎನ್​ಸಿಪಿ ಸಾಂಪ್ರದಾಯಿಕವಾಗಿ ಮುಸ್ಲಿಂ ಸಮುದಾಯದೊಂದಿಗೆ ಉತ್ತಮ ಸಂಬಂಧ ಹೊಂದಿತ್ತು ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮುಸ್ಲಿಂ ಬೆಂಬಲ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net