

ಕೀರ್ತಿನಾರಾಯಣ ಸಿ. ಬೆಂಗಳೂರು
ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಹೀಗೆ ಪ್ರತಿಯೊಂದು ವೈಯಕ್ತಿಕ ದಾಖಲೆಯನ್ನೂ ನಕಲಿಯಾಗಿ ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಂಥ ದಾಖಲೆಗಳನ್ನೇ ಕೊಟ್ಟು ‘ಸಿಮ್ ಕಾರ್ಡ್’ ಖರೀದಿಸುವ ದಂಧೆಯೂ ಅವ್ಯಾಹತವಾಗಿದೆ. ಯಾರದ್ದೋ ಹೆಸರಲ್ಲಿ ಇನ್ಯಾರೋ ದಾಖಲೆ ಸಲ್ಲಿಸಿ ಖರೀದಿಸುವ ಸಿಮ್ ಕಾರ್ಡ್ ಗಳನ್ನು ಅಪರಾಧ ಕೃತ್ಯಕ್ಕೆ ಬಳಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಏತನ್ಮಧ್ಯೆ ಜ.1ರಿಂದ ಅನುಷ್ಠಾನಕ್ಕೆ ಬಂದಿರುವ 2023ರ ದೂರಸಂಪರ್ಕ ಕಾಯ್ದೆಯಿಂದ ನಕಲಿ ಸಿಮ್ ಕಾರ್ಡ್ ದಂಧೆಗೆ ಕಡಿವಾಣ ಬೀಳುವ ಆಶಾಭಾವನೆ ವ್ಯಕ್ತವಾಗಿದೆ.
ಸೈಬರ್ ಕ್ರೖೆಂ, ಆರ್ಥಿಕ ಅಪರಾಧ, ಬ್ಯಾಂಕ್ಗಳಿಗೆ ವಂಚನೆ, ಭಯೋತ್ಪಾದನಾ ಚಟುವಟಿಕೆ... ಹೀಗೆ ಪ್ರತಿಯೊಂದಕ್ಕೂ ನಕಲಿ ಸಿಮ್ಳನ್ನೇ ಬಳಸಿರುವುದು ಪೊಲೀಸದದ ತನಿಖೆಯಲ್ಲಿ ದೃಢಪಟ್ಟಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ ಪೋರ್ಜರಿ ದಾಖಲೆ ಕೊಟ್ಟು ಖರೀದಿಸಿದ್ದ ಬರೋಬ್ಬರಿ 55.52 ಲಕ್ಷ ಸಿಮ್ ಕಾರ್ಡ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ.
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನಲ್ಲಿ (ಎನ್ಸಿಸಿಆರ್ಪಿ) ತನಿಖಾ ಸಂಸ್ಥೆಗಳು ಮಾಡಿದ ವರದಿ ಆಧರಿಸಿ ಸೈಬರ್ ಕ್ರೖೆಂ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗಿರುವ 2.78 ಲಕ್ಷ ಸಿಮ್ ಕಾರ್ಡ್ಗಳ ಸಂಪರ್ಕವನ್ನು ರದ್ದುಗೊಳಿಸಲಾಗಿದೆ.
2023ರಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಕರ್ನಾಟಕದಲ್ಲಿ ವಿವಿಧ ಟೆಲಿಕಾಂ ಕಂಪನಿಗಳ 25 ಸಾವಿರಕ್ಕೂ ಅಧಿಕ ಸಿಮ್ ಕಾರ್ಡ್ಗಳನ್ನು ನಕಲಿ ದಾಖಲೆ ಸಲ್ಲಿಸಿ ಖರೀದಿಸಿರುವುದು ದೃಢಪಟ್ಟಿತ್ತು. ಈ ಸಂಬಂಧ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಹೀಗಾಗಿ ಸಿಮ್ ಕಾರ್ಡ್ ದಂಧೆಯ ಬಗ್ಗೆ ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.
ನಿಮ್ಮ ಹೆಸರಿನಲ್ಲಿ ಬೇರೆಯವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಮ್ ಖರೀದಿಸಿದ್ದಾರೆಯೇ ಎಂಬುದನ್ನು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ವೆುಂಟ್ ಆಂಡ್ ಕನ್ಸ್ಯೂಮರ್ ಪೊ›ಟೆಕ್ಷನ್ (ಟಿಎಎಫ್ಸಿಒಪಿ) ವೆಬ್ಸೈಟ್ ಮೂಲಕ ಸಿಮ್ ಕಾರ್ಡ್ ಪರಿಶೀಲನೆ ಮಾಡಿಕೊಳ್ಳಬಹುದು. ಎಲ್ಲರೂ ಪರಿಶೀಲಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.
ತೆಗೆದುಕೊಂಡ ಕ್ರಮಗಳೇನು?
ಬೆಂಗಳೂರು ಪೊಲೀಸರ ತನಿಖೆ ಸಂದರ್ಭದಲ್ಲಿ ಸೈಬರ್ ಅಪರಾಧ ಸೇರಿ ಬೇರೆಬೇರೆ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗಿದ್ದ 20 ಸಾವಿರ ಸಿಮ್ ಕಾರ್ಡ್ಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಿಸಲಾಗಿದೆ. ಅನುಮಾನಾಸ್ಪದ ನಂಬರ್ಗಳು ಕಂಡುಬಂದರೆ ಅಂತಹ ಸಿಮ್ ಕಾರ್ಡ್ಗಳ ಸಂಪರ್ಕ ಕಡಿತ ಮಾಡಿಸಲಾಗುತ್ತದೆ.
| ಬಿ. ದಯಾನಂದ ಬೆಂಗಳೂರು ಪೊಲೀಸ್ ಆಯುಕ್ತ