

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನತೆ ಭಯಭೀತರಾಗಿದ್ದಾರೆ. ಬುಧವಾರ ಬೆಳಗಿನ ಜಾವ 3.166 ಸುಮಾರಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಹಲವಡೆ ಲಘು ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 2.6 ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಶೆಟ್ಟಿಗೆರೆ ಗ್ರಾಮ, ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಗಪರ್ತಿ ಮತ್ತು ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬೀರಗಾನಹಳ್ಳಿ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ನಿದ್ರೆಯಲ್ಲಿದ್ದ ಜನತೆ ಭಯದಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಕಳೆದ ತಿಂಗಳು ಅಂದರೆ ಡಿಸೆಂಬರ್ನಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಗ್ರಾಮ ಮತ್ತು ಸಾದೇನಹಳ್ಳಿ, ಮಂಡಿಕಲ್ಲು ಹೋಬಳಿ ಕೇಂದ್ರದಿಂದ 1.4 ಕಿ.ಮೀ ವ್ಯಾಪ್ತಿ, ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮದಗಳಲ್ಲಿ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಭೂಮಿ ನಡುಗಿದ ಅನುಭವ ಆಗಿತ್ತು. ಭೂಮಿ ಕಂಪಿಸಿದ ಪರಿಣಾಮ ಹಲವು ಮನೆಗಳು ಬಿರುಬಿಟ್ಟಿದ್ದವು. ಮನೆಯಲ್ಲಿದ್ದ ಪಾತ್ರೆ ಸಾಮಾನು ಚೆಲ್ಲಾಪಿಲ್ಲಿಯಾಗಿದ್ದವು.