

ಧಾರವಾಡ: ಬೆಂಗಳೂರಿನಲ್ಲಿ ಸಿಲುಕಿದ್ದ ಮೂಕ ಮತ್ತು ಕಿವುಡ ದಂಪತಿ ದೀಪಕ್ ಮತ್ತು ಬಸವ್ವ ಗಬ್ಬೂರ ಸರ್ಕಾರದ ಸ್ಪಂದನೆ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ನೆರವಿನೊಂದಿಗೆ ಧಾರವಾಡಕ್ಕೆ ಶುಕ್ರವಾರ ಆಗಮಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ದಂಪತಿಯನ್ನು ಪಾಲಕರೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ವೈದ್ಯರು ಇಬ್ಬರಿಗೂ 14 ದಿನಗಳ ಹೋಂ ಕ್ವಾರಂಟೈನ್ಗೆಸೂಚಿಸಿದ್ದಾರೆ.
ಪಾಲಕರು ಲಕಮಾಪೂರ ಗ್ರಾಮದ ತಮ್ಮ ಮನೆಯಲ್ಲಿ ಇಬ್ಬರಿಗೂ ಪ್ರತ್ಯೇಕವಾಗಿ ವಾಸಿಸುವ ವ್ಯವಸ್ಥೆ ಮಾಡಿದ್ದಾರೆ. ದೀಪಕ್ಗೆ ಕಳೆದ ವರ್ಷ ಬಸವ್ವ ಜೊತೆ ವಿವಾಹವಾಗಿತ್ತು. ಬಸವ್ವ ಗರ್ಭಿಣಿಯಾಗಿದ್ದು, ‘ತಮ್ಮನ್ನು ತವರಿಗೆ ಕರೆಸಿಕೊಳ್ಳಿ’ ಎಂದು ಮೂಕ ಭಾಷೆಯಲ್ಲಿ ಅಂಗಲಾಚಿದ್ದರು. ಈ ಕುರಿತು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು. ದೀಪಕ್ ತಂದೆ ಸುರೇಶ ಗಬ್ಬೂರ, ಮಗ ಹಾಗೂ ಸೊಸೆಯನ್ನು ಬೆಂಗಳೂರಿನಿಂದ ಕರೆಸಿಕೊಳ್ಳಲು ‘ವಿಜಯವಾಣಿ’ ವರದಿ ನೆರವಾಗಿದೆ. ಪತ್ರಿಕೆಯ ಸಾಮಾಜಿಕ ಕಾಳಜಿಗೆ ಧನ್ಯವಾದ ತಿಳಿಸಿದ್ದಾರೆ.